ವಿಶಾಖಪಟ್ಟಣಂ (ಆಂಧ್ರಪ್ರದೇಶ): ಪಾಕಿಸ್ತಾನ ಸೂಪರ್ ಲೀಗ್-2021 ಕ್ರಿಕೆಟ್ ಪಂದ್ಯಗಳ ಮೇಲೆ ಅಕ್ರಮ ಬೆಟ್ಟಿಂಗ್ ಮಾಡುತ್ತಿದ್ದ ಆರೋಪದ ಮೇಲೆ ವಿಶಾಖಪಟ್ಟಣಂನಲ್ಲಿ ನಾಲ್ವರನ್ನು ಭಾನುವಾರ ಬಂಧಿಸಲಾಗಿದೆ.
ಬಂಧಿತರಿಂದ ಎರಡು ಎಲ್‌ಸಿಡಿ ಟಿವಿ, ಎರಡು ಲ್ಯಾಪ್‌ಟಾಪ್, ಒಂದು ಟ್ಯಾಬ್, ಮೂರು ಸ್ಮಾರ್ಟ್‌ಫೋನ್, ಐದು ಬ್ಯಾಂಕ್ ಪಾಸ್ಬುಕ್, ಡೊಂಗಲ್, ರೂಟರ್ ಮತ್ತು 1,590 ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಶಾಖಪಟ್ಟಣದ ಪನೋರಮಾ ಬೆಟ್ಟಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಿಟಿ ಟಾಸ್ಕ್ ಫೋರ್ಸ್ ಮತ್ತು ಪಿಎಂ ಪಾಲೆಮ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಸಿ.ಎಚ್. ಶ್ರೀನಿವಾಸು ಎಂಬುವವನು ಈ ಬೆಟ್ಟಿಂಗ್ ಆಯೋಜಿಸಿದ್ದ ಎನ್ನಲಾಗಿದೆ.
ಕುಂಚಂಗಿ ರವಿ ಕುಮಾರ್ (29), ತಿಮ್ಮರೆಡ್ಡಿ ಧನುಂಜಯ್ (34), ಶಿವಾಜಿ (29), ಮತ್ತು ವೀರಪನೇಣಿ ರಂಬಾಬು (43) ಬಂಧಿತ ಆರೋಪಿಗಳಾಗಿದ್ದು, ಈ ಬೆಟ್ಟಿಂಗ್ ಆಯೋಜಿಸಿದ್ದ ಸಿ.ಎಚ್. ಶ್ರೀನಿವಾಸು ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.