ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಔಷಧ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಿಂದ ಉಂಟಾದ ಅಗ್ನಿ ಅವಘಡದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಏಳು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾಪತ್ತೆಯಾಗಿರುವ ಏಳು ಜನರ ಪತ್ತೆ ಕಾರ್ಯ ಕೈಗೊಳ್ಳಲಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ರಾಯಗಡದ ಮಹಾಡ್ ಎಂಐಡಿಸಿಯಲ್ಲಿರುವ ಬ್ಲೂ ಜೆಟ್ ಹೆಲ್ತ್‌ಕೇರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇಂದು ಬೆಳಗ್ಗೆ ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಾರ್ಖಾನೆಯಲ್ಲಿ ಸಿಕ್ಕಿಬಿದ್ದಿರುವ ಉಳಿದ ವ್ಯಕ್ತಿಗಳಿಗಾಗಿ ಅಧಿಕಾರಿಗಳು ಶೋಧ ಕಾರ್ಯಾ ಮುಂದುವರೆಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಕಾರ್ಖಾನೆಯಲ್ಲಿ ಬೆಂಕಿ ವ್ಯಾಪಿಸಿದ್ದು, ಬಳಿಕ ರಾಸಾಯನಿಕಗಳನ್ನು ಒಳಗೊಂಡಿರುವ ಬ್ಯಾರೆಲ್‌ಗಳಲ್ಲಿನ ಸ್ಫೋಟಕ್ಕೆ ಕಾರಣವೆಂದು ತಿಳಿದುಬಂದಿದೆ. ಈ ಘಟನೆ ಕುರಿತು ಹೆಚ್ಚುವರಿ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಪ್ರಕರಣ- ಮುಂಬೈನ ಬೃಹತ್ ವಸತಿ ಕಟ್ಟಡದಲ್ಲಿ ನಡೆದಿದ್ದ ಅಗ್ನಿ ಅವಘಡ: ಮುಂಬೈನ ಮಹಾವೀರ್ ನಗರದಲ್ಲಿನ ಪವನ್‌ಧಮ್ ವೀಣಾ ಸಂತೂರ್ ವಸತಿ ಕಟ್ಟಡದಲ್ಲಿ ಇತ್ತೀಚೆಗೆ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ ಇಬ್ಬರು ಸಾವಿಗೀಡಾಗಿದ್ದರು. ಮೂವರು ಗಾಯಗೊಂಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರು.
ಅಕ್ಟೋಬರ್ 23ರಂದು ಮಧ್ಯಾಹ್ನ ಏಕಾಏಕಿ ಕಟ್ಟಡದ ಮನೆಯೊಂದರಲ್ಲಿ ಬೆಂಕಿ ಕಂಡುಬಂದಿತ್ತು. ಇದು ಬೇರೆ ಮನೆಗಳಿಗೂ ವ್ಯಾಪಿಸಿತ್ತು. ಬೆಂಕಿ ಅವಘಡದಲ್ಲಿ ಸಿಲುಕಿದ್ದ ಇಬ್ಬರು ಮೃತಪಟ್ಟಿದ್ದರು. ಗಾಯಗೊಂಡಿದ್ದ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದರು.
ಬೃಹತ್ ವಸತಿ ಕಟ್ಟಡಕ್ಕೆ ಭಾರಿ ಬೆಂಕಿ ಹೊತ್ತಿಕೊಂಡಿದ್ದ ಬಗ್ಗೆ ಮುಂಬೈ ಮಹಾನಗರ ಪಾಲಿಕೆಯ ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿತ್ತು. ಆಗ ತಡ ಮಾಡದ ಅಗ್ನಿಶಾಮಕ ಸಿಬ್ಬಂದಿ 8 ವಾಹನಗಳ ಸಮೇತ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿಯನ್ನು ಹತೋಟಿಗೆ ತಂದಿದ್ದರು. ಈ ಕಟ್ಟಡದಿಂದ ಹಲವು ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಇದನ್ನೂ ಓದಿ: ಪಾಕಿಸ್ತಾನದ ಮಿಯಾನ್‌ವಾಲಿ ತರಬೇತಿ ವಾಯುನೆಲೆ ಮೇಲೆ ದಾಳಿ: ಮೂವರು ಉಗ್ರರ ಹತ್ಯೆ