ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ತಡೆಯುವುದು ಜನರ ಕೈಯಲ್ಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದ್ದಾರೆ.
ಪರಿಷ್ಕೃತ ಕೋವಿಡ್ -19 ವ್ಯಾಕ್ಸಿನೇಷನ್ ನೀತಿಯ ಅನುಷ್ಠಾನದದಲ್ಲಿ ದಾಖಲೆಯ 85 ಲಕ್ಷ ಕೋವಿಡ್ ವ್ಯಾಕ್ಸಿನೇಷನ್ ಡೋಸ್‌ಗಳನ್ನು ನೀಡಲಾಗಿದೆ. ಈ ಪ್ರಕ್ರಿಯೆಯ ಬಳಿಕ ಪಾಲ್ ಮಾತನಾಡಿದ್ದು, 18 ವರ್ಷಕ್ಕಿಂದ ಮೇಲ್ಪಟ್ಟವರಿಗೆ ಲಸಿಕೆ ನೀಡಲು ದೇಶೀಯವಾಗಿ ಲಭ್ಯವಿರುವ ಶೇ. 75ರಷ್ಟು ಲಸಿಕೆಗಳನ್ನು ಕೇಂದ್ರವು ಖರೀದಿಸುತ್ತಿದೆ ಎಂದು ಹೇಳಿದರು.
"ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಯೋಜನೆ ಸಮನ್ವಯ ಮತ್ತು ಕಾರ್ಯವನ್ನು ಮಿಷನ್ ಮೋಡ್‌ನಲ್ಲಿ ನಡೆಸಿದ್ದರಿಂದ ಇಷ್ಟರ ಮಟ್ಟಿಗೆ ಲಸಿಕೆ ಹಾಕಲು ಸಾಧ್ಯವಾಯಿತು. ಇನ್ನು ಮೂರನೇ ಅಲೆ ಸಂಭವಿಸುತ್ತದೆಯೋ ಇಲ್ಲವೋ ಎಂಬುದು ನಮ್ಮ ಕೈಯಲ್ಲಿದೆ. ನಾವು ಕೋವಿಡ್ ವಿರುದ್ಧ ಸೂಕ್ತವಾದ ಮಾರ್ಗಸೂಚಿ ಅನುಸರಿಸಿದರೆ, ಲಸಿಕೆ ಪಡೆದುಕೊಂಡರೆ ಮೂರನೇ ಅಲೆ ಏಕೆ ಉಲ್ಬಣವಾಗುತ್ತದೆ?" ಎಂದು ಪಾಲ್ ಪ್ರಶ್ನಿಸಿದ್ದಾರೆ.
"ಕೋವಿಡ್ಗೆ ಸೂಕ್ತವಾದ ಮಾರ್ಗಸೂಚಿಗಳನ್ನು ಅನುಸರಿಸಿದರೆ ಮೂರನೇ ಅಲೆಯನ್ನು ತಡೆಯಬಹುದು" ಎಂದು ಹೇಳಿದರು. ಭಾರತವು ತನ್ನ ಆರ್ಥಿಕತೆ ಮತ್ತೆ ಉತ್ತೇಜಿಸಲು ಮತ್ತು ಸಾಮಾನ್ಯ ಕೆಲಸವನ್ನು ಪುನರಾರಂಭಿಸಲು ತ್ವರಿತ ವ್ಯಾಕ್ಸಿನೇಷನ್‌ನ ಅಗತ್ಯ ಇದೆ ಎಂದು ನೀತಿ ಆಯೋಗ ಸದಸ್ಯ ಪಾಲ್ ಹೇಳಿದರು.
"ನಾವು ನಮ್ಮ ದೈನಂದಿನ ಕೆಲಸವನ್ನು ಮಾಡಬೇಕಾಗಿದೆ. ನಮ್ಮ ಸಾಮಾಜಿಕ ಜೀವನವನ್ನು ಕಾಪಾಡಿಕೊಳ್ಳಬೇಕು. ಶಾಲೆಗಳು, ವ್ಯವಹಾರಗಳನ್ನು ಮತ್ತೆ ತೆರೆಯಬೇಕು. ನಮ್ಮ ಆರ್ಥಿಕತೆಯನ್ನು ನೋಡಿಕೊಳ್ಳಬೇಕು. ಹೀಗಾಗಿ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳಿ " ಎಂದು ಪಾಲ್ ಸಲಹೆ ನೀಡಿದ್ದಾರೆ.