ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ದಿನದಿಂದ ದಿನಕ್ಕೆ ಮಹಾ ಅಘಾಡಿ ಸರ್ಕಾರ ತನ್ನ ಅಸ್ಥಿತ್ವ ವನ್ನು ಕಳೆದುಕೊಳ್ಳುತ್ತಿದೆ. ಇತ್ತಿಚೇಗೆ ನಡೆದ ಬೆಳವಣಿಗೆಯಲ್ಲಿ ಎಲ್ಲ ಬಂಡಾಯ ಶಾಸಕರು ತಮ್ಮ ಹೊಸ ನಾಯಕನನ್ನು ಆಯ್ದುಕೊಂಡು ಉಪ ಸ್ಪೀಕರ್ಗೆ ಮಾಹಿತಿ ನೀಡಿದ್ದಾರೆ.
ಹೌದು, ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಎಲ್ಲ ಬಂಡಾಯ ಶಿವಸೇನೆ ಶಾಸಕರು ಗುರುವಾರ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ಗೆ ಪತ್ರವೊಂದನ್ನು ಕಳುಹಿಸಿದ್ದು, ಏಕನಾಥ್ ಶಿಂಧೆ ಶಾಸಕಾಂಗದಲ್ಲಿ ತಮ್ಮ ಗುಂಪಿನ ನಾಯಕರಾಗಿ ಉಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನಾ ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯ ಎದ್ದಿರುವ ಹಿರಿಯ ಸಚಿವ ಶಿಂಧೆ ಅವರನ್ನು ಬದಲಿಸಿ ಶಿವಸೇನೆ ಶಾಸಕಾಂಗ ಪಕ್ಷದ ಗುಂಪು ನಾಯಕರಾಗಿ ಅಜಯ್ ಚೌಧರಿ ಅವರನ್ನು ನೇಮಿಸಲು ಅನುಮೋದನೆ ನೀಡಿದ್ದೇನೆ ಎಂದು ಜಿರ್ವಾಲ್ ಹೇಳಿದ್ದರು.
ಓದಿ: 'ಮಹಾ' ಶಾಸಕರು ತಂಗಿರುವ ಹೋಟೆಲ್ನಲ್ಲಿ 7 ದಿನಕ್ಕೆ 70 ರೂಂ ಬುಕ್: ದಿನದ ವೆಚ್ಚವೆಷ್ಟು ಗೊತ್ತಾ?
ಶಿಂಧೆ ಗುರುವಾರ ಸಂಜೆ ಉಪಸಭಾಪತಿಗೆ ಪತ್ರವನ್ನು ಕಳುಹಿಸುವ ಮೂಲಕ ಪ್ರಸ್ತುತ ಗುವಾಹಟಿಯಲ್ಲಿ ತಮ್ಮೊಂದಿಗೆ 37 ಸೇನಾ ಶಾಸಕರು ಸಹಿ ಮಾಡಿದ್ದಾರೆ. ಜೊತೆಗೆ ಸುನೀಲ್ ಪ್ರಭು ಬದಲಿಗೆ ಶಿವಸೇನಾ ಶಾಸಕ ಭರತ್ ಗೊಗವಾಲೆ ಅವರನ್ನು ಶಾಸಕಾಂಗ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ನಿಷ್ಠರಾಗಿರುವ ಕೆಲವು ಸೇನಾ ಕಾರ್ಯಕರ್ತರು ಪಕ್ಷವು ಬುಧವಾರ ಕರೆದಿದ್ದ ಸಂಜೆ 5 ಗಂಟೆಗೆ ಸಭೆಗೆ ಹಾಜರಾಗದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಸುನೀಲ್ ಪ್ರಭು ಕರೆದ ಸಭೆಗೆ ಹಾಜರಾಗದಿದ್ದಕ್ಕಾಗಿ ತಮ್ಮ ಬಣದ ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವವರಿಗೆ ಶಿಂಧೆ ತಿರುಗೇಟು ನೀಡಿದ್ದಾರೆ.
ನೀವು ಯಾರಿಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದೀರಿ?.. ನಿಮ್ಮ ಗಿಮಿಕ್‌ಗಳು ನಮಗೆ ತಿಳಿದಿದೆ. ಕಾನೂನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ವಿಪ್ ಶಾಸಕಾಂಗ ಕಾರ್ಯಗಳಿಗೆ ಅನ್ವಯಿಸುತ್ತದೆಯೇ ಹೊರತು ಯಾವುದೇ ಸಭೆಗೆ ಅಲ್ಲ. ನಿಮ್ಮ ಬಳಿ ಸಾಕಷ್ಟು ಸಂಖ್ಯೆಯ ಶಾಸಕರು ಇಲ್ಲ. ಆದರೂ ಸಹಿತ ನೀವು 12 ಶಾಸಕರ ಗುಂಪನ್ನು ರಚಿಸಿದ್ದೀರಾ. ಈ ಕಾರಣಕ್ಕೆ ನಿಮ್ಮ ವಿರುದ್ಧ ಕ್ರಮಕ್ಕೆ ನಾವು ಒತ್ತಾಯಿಸುತ್ತೇವೆ. ಇಂತಹ ಬೆದರಿಕೆಗಳಿಗೆ ನಾವು ಕಿವಿಗೊಡುವುದಿಲ್ಲ ಎಂದು ಶಿಂಧೆ ಟ್ವೀಟ್ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದಾರೆ.