ಕಾನ್ಪುರ(ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಮತ್ತೆ 30 ಝಿಕಾ ವೈರಸ್ ಸೋಂಕಿತರು ಪತ್ತೆಯಾಗಿದ್ದು, ಒಟ್ಟಾರೆ 66 ಪ್ರಕರಣಗಳು ದಾಖಲಾಗಿವೆ. ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿವಿಯ ವೈರಾಲಜಿ ಲ್ಯಾಬ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಕೆಜಿಎಂಯು) ಯಲ್ಲಿ ನಡೆಸಿದ ಪರೀಕ್ಷೆಯಲ್ಲಿ 30 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.
ಜಿಲ್ಲೆಯಲ್ಲಿ ಅ.23 ರಂದು ಮೊದಲ ಬಾರಿಗೆ ಝಿಕಾ ವೈರಸ್ ಪ್ರಕರಣ ದಾಖಲಾದ ಬಳಿಕ ಒಂದೇ ದಿನದಲ್ಲಿ ಕಂಡುಬಂದ ಅತಿಹೆಚ್ಚು ಸಂಖ್ಯೆಯ ಪ್ರಕರಣಗಳಾಗಿವೆ. ಸೋಂಕಿತರಾದ 30 ಜನರಲ್ಲಿ ಮೂವರು ಮಹಿಳೆಯರು, 27 ಜನ ಪುರುಷರಾಗಿದ್ದಾರೆ. ಗುರುವಾರದವರೆಗೆ ದಾಖಲಾದ ಪ್ರಕರಣಗಳಲ್ಲಿ 45 ಪುರುಷರು ಮತ್ತು 21 ಮಹಿಳೆಯರಿದ್ದಾರೆ. ಮೂರು ದಿನಗಳ ಹಿಂದೆ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. 30 ಜನರಲ್ಲೂ ಝಿಕಾ ದೃಢಪಟ್ಟಿದೆ ಎಂದು ಕಾನ್ಪುರ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ನೇಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.
ಝಿಕಾ ಸೊಳ್ಳೆಯಿಂದ ಹರಡುವ ವೈರಸ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈಡಿಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಬೆಳಗ್ಗೆ ಮತ್ತು ಮಧ್ಯಾಹ್ನ ಅಥವಾ ಸಂಜೆಯ ಸಮಯದಲ್ಲಿ ಇವುಗಳ ಉಪಟಳ ಹೆಚ್ಚು. ಅಕ್ಟೋಬರ್ 23 ರಂದು ಕಾನ್ಪುರದ ಭಾರತೀಯ ವಾಯುಪಡೆಯ ಸ್ಟೇಷನ್ ಪ್ರದೇಶದಲ್ಲಿ ರಾಜ್ಯದಲ್ಲಿಯೇ ಮೊದಲ ಝಿಕಾ ವೈರಸ್ ಪ್ರಕರಣ ವರದಿಯಾಗಿತ್ತು. ಅಲ್ಲಿನ ವಾರಂಟ್ ಅಧಿಕಾರಿಯಲ್ಲಿ ಝಿಕಾ ವೈರಸ್ ಪಾಸಿಟಿವ್ ಕಂಡುಬಂದಿತ್ತು. ಇದಾದ ಬಳಿಕ ಇದೇ ಪ್ರದೇಶದಿಂದ ಮತ್ತೆ 3 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.
ಗುರುವಾರ ಪತ್ತೆಯಾದ 30 ಪ್ರಕರಣಗಳು ಭವಾನಿಪುರ ಮತ್ತು ಕೊಯ್ಲಾ ನಗರಗಳಲ್ಲಿ ದೃಢಪಟ್ಟಿವೆ. ಇದರಿಂದ ಈ ಪ್ರದೇಶದ ಮೇಲೆ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. 66 ಝಿಕಾ ವೈರಸ್ ಪ್ರಕರಣಗಳೊಂದಿಗೆ ಕಾನ್ಪುರ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಕೇರಳದಲ್ಲಿ 90 ಪ್ರಕರಣಗಳು ದೃಢಪಟ್ಟಿದ್ದು, ಮೊದಲ ಸ್ಥಾನದಲ್ಲಿದೆ.