ಹೈದರಾಬಾದ್ : ಕಾಳಸಂತೆಯಲ್ಲಿ ವೈದ್ಯಕೀಯ ಉದ್ದೇಶದ ಆಮ್ಲಜನಕ ಸಿಲಿಂಡರ್ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೆಲೆ ಹೈದರಾಬಾದ್ನಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಂಗಳವಾರ ಮಾಹಿತಿ ನೀಡಿವೆ.
ಆಮ್ಲಜನಕ ಸಿಲಿಂಡರ್ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸೈಯದ್ ಅಬ್ದುಲ್ಲಾ, ಮೊಹಮ್ಮದ್ ಮಜಾರ್ ಮತ್ತು ಸೈಯದ್ ಆಸಿಫ್ ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಅಕ್ರಮವಾಗಿ ಸಿಲಿಂಡರ್ಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಟಿ) ಮಲ್ಕಾಜ್‌ಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಪಾಸಣೆ ಆರಂಭಿಸಿದೆ.
ಈ ವೇಳೆ ವ್ಯಾನ್ ತಡೆದು ಪರಿಶೀಲಿಸಿದಾಗ ತಲಾ 150 ಲೀಟರ್ ಆಮ್ಲಜನಕ ಹೊಂದಿರುವ ಐದು ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಸಿಲಿಂಡರ್ಗಳನ್ನು ಜಪ್ತಿ ಮಾಡಿದೆ.
ಇದನ್ನೂ ಓದಿ: ಕೋವಿಡ್ನಿಂದ ಅಕ್ರಮ -ನಕಲಿ ಔಷಧಗಳ ಹಾವಳಿ ಹೆಚ್ಚಳ : ವರದಿ
ಈ ವೇಳೆ ವ್ಯಾನ್ ಚಾಲಕ ಮತ್ತು ಇತರರು ಸಿಲಿಂಡರ್ಗಳ ಬಗ್ಗೆ ನಿಖರ ದಾಖಲೆಗಳನ್ನು ಪೊಲೀಸರ ಬಳಿ ಪ್ರದರ್ಶಿಸಲು ವಿಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರಲ್ಲಿ ಓರ್ವ ವ್ಯಕ್ತಿ ಎನ್ಜಿಒ ನಡೆಸುತ್ತಿದ್ದು, ಕೋವಿಡ್ ರೋಗಿಗಳಿಗೆ ಮತ್ತು ಆ್ಯಂಬುಲೆನ್ಸ್ಗಳಿಗೆ ಉಚಿತ ಆಮ್ಲಜನಕ ಮತ್ತು ಇತರ ವೈದ್ಯಕೀಯ ಸೇವೆಗಳನ್ನು ನೀಡುವುದಾಗಿ ಹೇಳುತ್ತಿದ್ದನು ಎಂದು ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್ ತಿಳಿಸಿದ್ದಾರೆ.
ಆರೋಪಿಗಳು ಪ್ರತಿ ಆಕ್ಸಿಜನ್ ಸಿಲಿಂಡರ್‌ನ 16 ಸಾವಿರ ರೂ.ಗೆ ಖರೀದಿಸಿ, ತುರ್ತು ಅಗತ್ಯ ಇರುವ ರೋಗಿಗಳಿಗೆ ತಲಾ 25 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.