ಮುಂಬೈ: ಕೊರೊನಾ ವೈರಸ್ನ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಇದರ ಮಧ್ಯೆಯೂ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಅನೇಕ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳು ಸಂಪೂರ್ಣವಾಗಿ ಪುನಾರಂಭಗೊಂಡಿವೆ. ಆದ್ರೆ, ಅನೇಕ ವಿದ್ಯಾರ್ಥಿಗಳು ಇದೀಗ ಕೋವಿಡ್ ಸೋಂಕಿಗೆ ತುತ್ತಾಗುತ್ತಿದ್ದಾರೆ. ಮಹಾರಾಷ್ಟ್ರ ರಾಜಧಾನಿ ಮುಂಬೈನ ಕೆಇಎಂ ಆಸ್ಪತ್ರೆಯ 29 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದ್ದು ಆತಂಕಕ್ಕೆ ಕಾರಣವಾಗಿದೆ.
ಕಾಲೇಜಿನ 29 ವಿದ್ಯಾರ್ಥಿಗಳ ಪೈಕಿ 27 ವಿದ್ಯಾರ್ಥಿಗಳು ಕೋವಿಡ್ನ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದರು. ಸೋಂಕು ತಗುಲಿರುವ ಪೈಕಿ 23 ವಿದ್ಯಾರ್ಥಿಗಳು ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡ್ತಿದ್ದು, 6 ವಿದ್ಯಾರ್ಥಿಗಳು ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕೋವಿಡ್ ಸೋಂಕು ತಗುಲಿರುವವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದಂತೆ ಎಲ್ಲರೂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಕೆಇಎಂ ಮೆಡಿಕಲ್ ಕಾಲೇಜಿನಲ್ಲಿ 1,100 ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಡಾ. ಹೇಮಂತ್ ದೇಶಮುಖ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ: ಪಿಯು ಕಾಲೇಜಿನ 28 ವಿದ್ಯಾರ್ಥಿನಿಯರಿಗೆ ತಗುಲಿದ ಕೋವಿಡ್ ಸೋಂಕು
ಕಳೆದೆರಡು ದಿನಗಳ ಹಿಂದೆ ಕರ್ನಾಟಕದ ಆನೇಕಲ್ನ ಕಾಲೇಜಿನಲ್ಲಿ 68 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಇಂದು ಕೂಡ ನಾಗಮಂಗಲ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 28 ವಿದ್ಯಾರ್ಥಿನಿಯರಲ್ಲಿ ಸೋಂಕು ದೃಢಪಟ್ಟಿದೆ.