ಪ್ರಯಾಗರಾಜ್ (ಉತ್ತರ ಪ್ರದೇಶ): ಕೊರೊನಾ ಬಲೆಯಲ್ಲಿ ಸಿಲುಕಿದ್ದ ಒಂದೇ ಕುಟುಂಬದ 26 ಮಂದಿ ಸದಸ್ಯರು ವೈರಸ್ ವಿರುದ್ಧ ಹೋರಾಡಿ ಗೆದ್ದು ಇತರರಿಗೆ ಮಾದರಿಯಾಗಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿರುವ ರಾಘವೇಂದ್ರ ಪ್ರಸಾದ್ ಮಿಶ್ರಾ ಕುಟುಂಬದ 26 ಮಂದಿ ಏಪ್ರಿಲ್ನಲ್ಲಿ ಸೋಂಕಿಗೆ ಒಳಗಾಗಿದ್ದರು. ಮಿಶ್ರಾ ಅವರಿಗೆ 85 ವರ್ಷವಾಗಿದ್ದು, ಒಂದೇ ಕಿಡ್ನಿಯೊಂದಿಗೆ ಬದುಕುತ್ತಿದ್ದಾರೆ. ಇವರಿಗೆ 8 ಗಂಡು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳಿದ್ದಾರೆ.
ಮಿಶ್ರಾ ಅವರ ಒಬ್ಬ ಮಗ ವೈದ್ಯನಾಗಿದ್ದು, ತಾನು ಪಾಸಿಟಿವ್ ಆಗಿದ್ದರೂ ವೈರಸ್ಗೆ ತುತ್ತಾದ ಕುಟುಂಬದವರ ಆರೈಕೆ ಮಾಡಿದ್ದಾರೆ. ಕುಟುಂಬದ ಪ್ರತಿಯೊಬ್ಬ ಸದಸ್ಯರ ಬಿಪಿ ಮತ್ತು ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತಿದ್ದರು. ಆಕ್ಸಿಜನ್ ಮಟ್ಟ ಕಡಿಮೆಯಾದ ಸದಸ್ಯರಿಗೆ ಆಮ್ಲಜನಕದ ವ್ಯವಸ್ಥೆಯನ್ನೂ ಮಾಡಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ 2 ಕೋಟಿ ಸೋಂಕಿತರು ಗುಣಮುಖ... ಒಂದೇ ದಿನ 4,000 ಮಂದಿ ಸಾವು
ಇವರ ಒಬ್ಬ ಸೊಸೆ ಯೋಗ ಬೋಧಕರಾಗಿದ್ದು, ರಾಜರ್ಷಿ ಟಂಡನ್ ಓಪನ್ ಯೂನಿವರ್ಸಿಟಿಯಿಂದ ಯೋಗದಲ್ಲಿ ಡಿಪ್ಲೊಮಾ ಪಡೆದಿದ್ದು ಮತ್ತು ಬಾಬಾ ರಾಮದೇವ್ ಅವರ ಆಶ್ರಮದಲ್ಲಿ ತರಬೇತಿ ಪಡೆದಿದ್ದಾರೆ. ಇವರು ತಮ್ಮ ಕುಟುಂಬದ ಸದಸ್ಯರಿಗೆ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಯೋಗವನ್ನು ಮಾಡಿಸುತ್ತಿದ್ದರು.
ಚಿಕ್ಕ ಮಕ್ಕಳಿಂದ ಹಿಡಿದು ಮಿಶ್ರಾರವರೆಗೆ ಯಾರೂ ಕೂಡ ಕೊರೊನಾಗೆ ಭಯ ಪಡದೆ, ಮನೆಯಲ್ಲಿಯೇ ಕ್ವಾರಂಟೈನ್ ಆಗಿ, ಔಷಧಿಯನ್ನು ಪಡೆಯುತ್ತಾ, ಯೋಗ-ದೈನಂದಿನ ವ್ಯಾಯಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಪೌಷ್ಟಿಕ ಆಹಾರ ಸೇವಿಸುತ್ತಾ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.