ಮಯೂರ್ಭಂಜ್(ಒಡಿಶಾ) : ಕೊರೊನಾ ವೈರಸ್ನ 2ನೇ ಅಲೆಯಿಂದ ತತ್ತರಿಸಿದ್ದ ಜನ ಜೀವನ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ಬೆನ್ನಲ್ಲೇ ಕೆಲ ರಾಜ್ಯಗಳಲ್ಲಿ ಮತ್ತಷ್ಟು ಸೋಂಕಿತ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಇದು 3ನೇ ಅಲೆಯ ಆತಂಕ ಮೂಡಿಸಿದೆ.
ಕಳೆದ ಎರಡು ದಿನಗಳಲ್ಲಿ ಕರ್ನಾಟಕದ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ 281 ಕೋವಿಡ್ ಸೋಂಕಿತ ಪ್ರಕರಣ ದೃಢಪಟ್ಟಿವೆ. ಇದರ ಬೆನ್ನಲ್ಲೇ ಇದೀಗ ಒಡಿಶಾದ ಮಯೂರ್ಭಂಜ್ ವಸತಿ ಶಾಲೆಯ 26 ವಿದ್ಯಾರ್ಥಿನಿಯರಲ್ಲಿ ಕೋವಿಡ್-19 ಪತ್ತೆಯಾಗಿದೆ.
ಮಯೂರ್ಭಂಜ್ ಜಿಲ್ಲೆಯ ಠಾಕುರ್ಮುಂಡಾ ಬ್ಲಾಕ್ನ ಚಮಕ್ಪುರ ವಸತಿ ಶಾಲೆಯ ವಿದ್ಯಾರ್ಥಿನಿಯರಲ್ಲಿ ಸೋಂಕು ಕಾಣಿಸಿದೆ. ಉಳಿದ ವಿದ್ಯಾರ್ಥಿನಿಯರಲ್ಲಿ ನೆಗಡಿ, ಕೆಮ್ಮಿನ ಲಕ್ಷಣ ಕಂಡು ಬಂದಿರುವ ಕಾರಣ ಸ್ವ್ಯಾಬ್ ಮಾದರಿ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ವಸತಿ ಶಾಲೆಯಲ್ಲಿ 20 ಸಿಬ್ಬಂದಿ ಸೇರಿದಂತೆ ಒಟ್ಟು 259 ವಿದ್ಯಾರ್ಥಿಗಳಿದ್ದಾರೆ. ಇದೀಗ ಸೋಂಕು ಕಾಣಿಸಿರುವ ಎಲ್ಲರನ್ನ ಪ್ರತ್ಯೇಕವಾಗಿರಿಸಲಾಗಿದೆ.
ಇದನ್ನೂ ಓದಿರಿ: ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಮತ್ತೆ 77 ಮಂದಿಗೆ ಕೋವಿಡ್ ದೃಢ!
ಶಾಲೆಗೆ ಈಗಾಗಲೇ ಉಪ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ವೈದ್ಯರ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಕಳೆದ ಕೆಲ ದಿನಗಳ ಹಿಂದೆ ಸುಂದರ್ಗಢ ಜಿಲ್ಲೆಯ ಬಾಲಕಿಯರ ಪ್ರೌಢಶಾಲೆಯಲ್ಲಿ 53 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿತ್ತು.