ನವದೆಹಲಿ : ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಆಪರೇಷನ್ ಗಂಗಾ ಹೆಸರಿನ ಕಾರ್ಯಾಚರಣೆಯಡಿ ಭಾರತಕ್ಕೆ ಕರೆತರಲಾಗಿದೆ. ಈ ಸ್ಥಳಾಂತರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಮಹಿಳಾ ಪೈಲಟ್ ಮಹಾಶ್ವೇತಾ ಚಕ್ರವರ್ತಿ ಅವರು ಪೋಲೆಂಡ್ ಮತ್ತು ಹಂಗೇರಿಯಿಂದ 800 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ.
ಕೋಲ್ಕತ್ತಾದ ನ್ಯೂಟೌನ್ ನಿವಾಸಿಯಾಗಿರುವ 24 ವರ್ಷದ ಮಹಿಳಾ ಪೈಲಟ್ ಮಹಾಶ್ವೇತಾ ಪೋಲೆಂಡ್ ಮತ್ತು ಹಂಗೇರಿಯನ್ ಗಡಿಗಳಿಂದ 800 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಆಪರೇಷನ್ ಗಂಗಾದ ಹೆಮ್ಮೆಯ ಸದಸ್ಯರಾದ ಮಹಾಶ್ವೇತಾ ಚಕ್ರವರ್ತಿ ಅವರು ಫೆಬ್ರವರಿ 27 ಮತ್ತು ಮಾರ್ಚ್ 7ರ ನಡುವೆ ಆರು ಬಾರಿ ಸ್ಥಳಾಂತರಿಸುವ ವಿಮಾನಗಳನ್ನು ಹಾರಿಸಿದ್ದರು.
ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಉಪಾಧ್ಯಕ್ಷೆ ಪ್ರಿಯಾಂಕಾ ಶರ್ಮಾ ಈ ಕುರಿತಾದ ಮಾಹಿತಿಯನ್ನ ಟ್ವೀಟ್ ಮಾಡಿದ್ದಾರೆ. ಮಹಾಶ್ವೇತಾ ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ತನುಜಾ ಚಕ್ರವರ್ತಿ ಅವರ ಪುತ್ರಿ, ಪೋಲೆಂಡ್ ಮತ್ತು ಹಂಗೇರಿಯಿಂದ 800 ವಿದ್ಯಾರ್ಥಿಗಳನ್ನು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 24ರಂದು ರಷ್ಯಾ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಂದಿನಿಂದ ಆಪರೇಷನ್ ಗಂಗಾ ಕಾರ್ಯಾಚರಣೆಯಡಿ ಭಾರತವು ಈವರೆಗೆ 20,000ಕ್ಕೂ ಹೆಚ್ಚು ಭಾರತೀಯರನ್ನ ಯುದ್ಧ ಪೀಡಿತ ಉಕ್ರೇನ್‌ನಿಂದ ಸ್ಥಳಾಂತರಿಸಿದೆ.
ಇದನ್ನೂ ಓದಿ; ಕೆಮಿಕಲ್ ಅಂಗಡಿಗಳಿಗೆ ಬೆಂಕಿ ಹಚ್ಚಿ ಮೆಡಿಕಲ್ ವಿದ್ಯಾರ್ಥಿಗಳಿಂದ ಕಲ್ಲು ತೂರಾಟ : 10 ಮಂದಿಗೆ ಗಾಯ