ಜೈಪುರ್(ರಾಜಸ್ಥಾನ): ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿ ಮತ್ತಷ್ಟು ವ್ಯಾಪಿಸುತ್ತಿದೆ. ಅದೇ ಕಾರಣಕ್ಕಾಗಿ ದಿನವೊಂದಕ್ಕೆ ನಾಲ್ಕು ಸಾವಿರ ಜನ ಡೆಡ್ಲಿ ವೈರಸ್ಗೆ ಬಲಿಯಾಗುತ್ತಿದ್ದಾರೆ.
ಸದ್ಯ ಲಭ್ಯವಾಗಿರುವ ಮಾಹಿತಿವೊಂದರ ಪ್ರಕಾರ ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವ ವ್ಯಕ್ತಿಯ ಅಂತ್ಯಕ್ರಿಯೆ ವೇಳೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಕ್ಕಾಗಿ 21 ಜನರು ಒಂದೇ ಗ್ರಾಮದಲ್ಲಿ ಸಾವನ್ನಪ್ಪಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಏಪ್ರಿಲ್ 15ರಿಂದ ಮೇ 5ರೊಳಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ರಾಜಸ್ಥಾನದ ಸಿಕಾರ್ ಜಿಲ್ಲೆಯ ಖೀರ್ವಾ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಕೋವಿಡ್ನಿಂದ ನಾಲ್ವರು ಸಾವನ್ನಪ್ಪಿದ್ದು, ಉಳಿದವರು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಪಾಗಲ್ ಪ್ರೇಮಿ: ಪ್ರೀತಿ ನಿರಾಕರಿಸಿದ್ದ ಯುವತಿ ಮೇಲೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಯತ್ನ
ಕೋವಿಡ್ನಿಂದ ಸಾವನ್ನಪ್ಪಿದ್ದ ವ್ಯಕ್ತಿಯನ್ನ ಏಪ್ರಿಲ್ 21ರಂದು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದರಲ್ಲಿ 150ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಅವರು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ವ್ಯಕ್ತಿಯ ಮೃತದೇಹವನ್ನ ಕ್ಯಾರಿ ಬ್ಯಾಗ್ನಿಂದ ಹೊರತೆಗೆದು ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗಲಾಗಿತ್ತು. ಸ್ಮಶಾನದಲ್ಲಿ ಅನೇಕರು ಅದನ್ನ ಮುಟ್ಟಿದ್ದರು ಎನ್ನಲಾಗಿದೆ.
ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಎಲ್ಲ ಕುಟುಂಬಗಳ ಸದಸ್ಯರ ಗಂಟಲು ದ್ರವ ಪಡೆದುಕೊಳ್ಳಲಾಗಿದ್ದು, ಗ್ರಾಮದ ತುಂಬೆಲ್ಲ ಸ್ಯಾನಿಟೈಸ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.