ವಾರಾಣಸಿ: ಜಿಲ್ಲೆಯ ಪಾಂಡೆಪುರದ ಪಹರಿಯಾ ಮಂಡಿಯಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಅನ್ನು ಸಾಗಿಸಲಾಗಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ ಬೆನ್ನಲ್ಲೇ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಂಗಳವಾರ ರಾತ್ರಿ ವೇಳೆಗೆ ವಾರಾಣಸಿಯ ಪಹರಿಯಾ ಮಂಡಿ ಪ್ರದೇಶದ ಸ್ಟ್ರಾಂಗ್ ರೂಮ್ ಎದುರಿನಲ್ಲಿ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ನೆರೆದು ಪ್ರತಿಭಟನೆ ನಡೆಸಿದರು. ಈ ವೇಳೆ ಶಾಂತಿ ಮತ್ತು ನ್ಯಾಯಯುತ ಮತ ಎಣಿಕೆಗಾಗಿ ಡಿಎಂ ಮತ್ತು ವಿಭಾಗೀಯ ಆಯುಕ್ತರನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಆರೋಪಿಸಿದರು.
ಈ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾಡಳಿತ, ತರಬೇತಿಗಾಗಿ 20 ಇವಿಎಂಗಳನ್ನು ತರಲಾಗಿದ್ದು ಅದನ್ನು ಸಾಗಿಸಲಾಗಿದೆ ಎಂದು ತಿಳಿಸಿತು. ಇದಕ್ಕೆ ಅಭ್ಯರ್ಥಿಗಳು ಆಕ್ಷೇಪ ಸಲ್ಲಿಸಿದ್ದು, ಬಳಿಕ ತಡರಾತ್ರಿ ವಿವಿಧ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಇವಿಎಂಗಳನ್ನು ಪರಿಶೀಲಿಸಲಾಯಿತು. ತನಿಖೆ ವೇಳೆ ಅಧಿಕಾರಿ ಹಾಗೂ ಅಭ್ಯರ್ಥಿಗಳ ನಡುವೆ ವಾಗ್ವಾದ ನಡೆಯಿತು. ಬಳಿಕ ಎಲ್ಲಾ ಇವಿಎಂಗಳನ್ನು ತೆರೆದ ಮೇಜಿನ ಮೇಲೆ ಇಟ್ಟು ಪರಿಶೀಲಿಸಲಾಯಿತು. ಚುನಾವಣಾ ಆಯೋಗದ ವೀಕ್ಷಕರ ಸಮ್ಮುಖದಲ್ಲಿ ಎಲ್ಲ ನಿಯಂತ್ರಣ ಘಟಕಗಳು, ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳನ್ನು ಪರಿಶೀಲಿಸಲಾಗಿದೆ.
ಇದನ್ನೂ ಓದಿ: ರಷ್ಯಾ ದಾಳಿಗೆ ಮೂರು ಮಕ್ಕಳು ಸೇರಿ 7 ಮಂದಿ ಸಾವು: ಮಾರ್ಷಲ್ ಆರ್ಟ್ಸ್ ಚಾಂಪಿಯನ್ ಕೂಡ ಬಲಿ
ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಎಲ್ಲ ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರ ಬೀಳಲಿದೆ.