ಸೋನಿಪತ್ (ಹರಿಯಾಣ) : ವಿಷಕಾರಿ ಮದ್ಯಸೇವನೆ ಮಾಡಿ ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಹರಿಯಾಣದ ಸೋನಿಪತ್ನಲ್ಲಿ ನಡೆದಿದೆ.
ಕಳೆದ ಹಲವು ದಿನಗಳಿಂದ ವಿಷಕಾರಿ ಮದ್ಯಸೇವನೆ ಮಾಡಿ ಹರಿಯಾಣದ ಸೋನಿಪತ್ ಮತ್ತು ಪಾಣಿಪತ್‌ನಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು ಈ ಸಾಲಿಗೆ ಇದೀಗ ಮತ್ತಿಬ್ಬರು ಸೇರಿದ್ದಾರೆ. ವಿಷಕಾರಿ ಮದ್ಯಸೇವನೆಯಿಂದ ಸಾವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಮೃತಪಟ್ಟವರಲ್ಲಿ ಹೆಚ್ಚಿನವರು ಸೋನಿಪತ್ ಪಟ್ಟಣದ ಗೋಹಾನಾ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.
ವಿಷಕಾರಿ ಮದ್ಯಸೇವನೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಭಾನುವಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು ತನಿಖೆಯನ್ನು ತೀವ್ರಗೊಳಿಸಿದೆ. 15 ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ವರದಿಯನ್ನು ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ನಾರ್ಕೋಟಿಕ್ಸ್) ಶ್ರೀಕಾಂತ್ ಜಾಧವ್ ನೇತೃತ್ವದ ಎಸ್‌ಐಟಿ ತಂಡ ತಿಳಿಸಿದೆ.
ಮೃತ ವ್ಯಕ್ತಿಗಳ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ರಾಜ್ಯದಲ್ಲಿ ಎಲ್ಲೆ ಮೀರಿದ ಅಕ್ರಮ ಹಾಗೂ ವಿಷಕಾರಿ ಮದ್ಯ ಮಾರಾಟ ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ವಿಷಕಾರಿ ಮದ್ಯಸೇವನೆ ಮಾಡಿ ಸಾವನ್ನಪ್ಪಿದವರ ಸಂಬಂಧಿಕರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ನೀಡುವುದಾಗಿ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶನಿವಾರ ಪ್ರಕಟಿಸಿದ್ದಾರೆ.