ಖಮ್ಮಂ : ಶ್ರೀರಾಮ ನವಮಿಯಂದು ಭಕ್ತರು ಸ್ಥಳೀಯ ದೇವಾಲಯದಲ್ಲಿ ಭಜನೆ ಮಾಡುತ್ತಾ ತಲ್ಲೀಣರಾಗಿದ್ದರು. ಕೆಲವೊಂದು ಮಕ್ಕಳು ದೇವಸ್ಥಾನದ ಮುಂದೆ ಆಟವಾಡುತ್ತಿದ್ದರು. ಆದ್ರೆ, ಯಮಸ್ವರೂಪಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿಲ್ಲದೇ ದೇವಸ್ಥಾನೊಳಗೆ ನುಗ್ಗಿದೆ. ಈ ವೇಳೆ ಒಂದೇ ಕುಟುಂಬದ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಕೊಣಿಜರ್ಲ ತಾಲೂಕಿನ ಪಲ್ಲಿಪಾಡು ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ? : ರಾಮ ನವಮಿ ಹಿನ್ನೆಲೆ ಇಲ್ಲಿನ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ಸೀತಾರಾಮ ಕಲ್ಯಾಣ ಜರುಗಿತು. ಸಂಜೆ ವೇಳೆ ದೇವಾಲಯದಲ್ಲಿ ಭಜನೆ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಸ್ಥಳೀಯರೆಲ್ಲರೂ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೆಲ ಮಕ್ಕಳು ದೇವಾಲಯದ ಮುಂದೆ ಆಟವಾಡುತ್ತಿದ್ದರು.
ಲೈಟ್ ಕಂಬಕ್ಕೆ ಡಿಕ್ಕಿ : ಇದೇ ಸಮಯದಲ್ಲಿ ಖಮ್ಮಂನಿಂದ ದುದ್ದೇಪೂಡಿ ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನ ಅತೀವೇಗದಿಂದ ದೇವಾಲಯದ ಮುಂದೆ ಇದ್ದ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲ, ಆಟವಾಡುತ್ತಿದ್ದ ಮಕ್ಕಳ ಮೇಲೆ ಹರಿದು ದೇವಾಲಯಕ್ಕೂ ನುಗ್ಗಿದೆ. ಪರಿಣಾಮ ಅಕ್ಕ-ತಂಗಿಯರಾದ ದೇದಿಪ್ಯಾ (9) ಮತ್ತು ಸಹಾಸ್ರ (7) ಎಂಬುವರು ಸೇರಿದಂತೆ 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.
ಅಕ್ಕ-ತಂಗಿ ಸಾವು : ವಾಹನದಲ್ಲಿ ರೈತ ನಾಗಾಟಿ ವೆಂಕಣ್ಣ, ಡ್ರೈವರ್ ಪೋತುರಾಜುಗೆ ಗಾಯಗಳಾಗಿದ್ದವು. ತೀವ್ರವಾಗಿ ಗಾಯಗೊಂಡಿದ್ದ ವೆಂಕಣ್ಣ, ದೇದಿಪ್ಯಾ ಮತ್ತು ಸಹಾಸ್ರಳನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಮಾರ್ಗ ಮಧ್ಯೆದಲ್ಲಿ ಅಕ್ಕ-ತಂಗಿಯರಿಬ್ಬರು ಕಣ್ಣುಮುಚ್ಚಿದ್ದರು.
ಮುಗಿಲು ಮುಟ್ಟಿದ ಆಕ್ರಂದನ : ಹಬ್ಬದಂದು ಮಕ್ಕಳ ಸಾವು ಕಂಡು ಇಡೀ ಗ್ರಾಮವೇ ಕಣ್ಣೀರು ಹಾಕುತ್ತಿದೆ. ತಂದೆ-ತಾಯಿಯ ರೋದನೆ ಮುಗಿಲು ಮುಟ್ಟಿದೆ. ತಂದೆ-ತಾಯಿ ಪೂಜೆ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ನಿಜಕ್ಕೂ ಶೋಚನೀಯ ಸಂಗತಿಯಾಗಿದೆ.
ಪ್ರಕರಣ ದಾಖಲು : ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.