ಪ್ರತೀ 3 ಮನೆಗಳಲ್ಲಿ 2 ಮನೆಗಳು ಈ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಯೋಚನೆ ಇಲ್ಲ ಎಂದು ಸಮುದಾಯದ ಸಾಮಾಜಿಕ ಮಾಧ್ಯಮ ವೇದಿಕೆಯ ನಡೆಸಿದ ಸಮೀಕ್ಷೆ ತಿಳಿಸಿದೆ. ಹೆಚ್ಚುತ್ತಿರುವ ಮಾಲಿನ್ಯ ಮತ್ತು ಸರ್ಕಾರ ವಿಧಿಸಿದ ನಿಷೇಧದಿಂದಾಗಿ ಪಟಾಕಿಗಳ ಲಭ್ಯತೆ ಇಲ್ಲದಿರುವುದು ಸೇರಿದಂತೆ ಹಲವಾರು ಕಾರಣಗಳಿಗಾಗಿ ಜನರು ಈ ಬಾರಿ ಪಟಾಕಿಯಿಂದ ದೂರ ಉಳಿಯಲಿದ್ದಾರೆ.
ಸುಮಾರು ಶೇಕಡಾ 42 ರಷ್ಟು ಕುಟುಂಬಗಳು ದೀಪಾವಳಿಯಂದು ಪಟಾಕಿ ನಿಷೇಧದ ಪರವಾಗಿದ್ದಾರೆ ಮತ್ತು 53 ಪ್ರತಿಶತದಷ್ಟು ಜನರು ಯಾವುದೇ ನಿರ್ಬಂಧಗಳನ್ನು ಬೆಂಬಲಿಸುವುದಿಲ್ಲ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯು ಹೇಳಿದೆ.ಈ ಸಮೀಕ್ಷೆಯು ಭಾರತದ 371 ಜಿಲ್ಲೆಗಳಾದ್ಯಂತ 28,000 ನಾಗರಿಕರ ಪ್ರತಿಕ್ರಿಯೆಗಳನ್ನು ಆಧರಿಸಿದೆ.
ಇದಲ್ಲದೆ, ಅನೇಕ ಕುಟುಂಬಗಳು ಈ ವರ್ಷ ಕುಟುಂಬದ ಸದಸ್ಯರನ್ನು ಕಳೆದುಕೊಂಡಿವೆ. ಕೆಲವು ಕುಟುಂಬಗಳ ಸದಸ್ಯರು ಇನ್ನೂ ಕೋವಿಡ್ನಿಂದ ಚೇತರಿಸಿಕೊಂಡಿಲ್ಲ, ಜೊತೆಗೆ ಮತ್ತೆ ಕೆಲವು ಮನೆಗಳಲ್ಲಿ ಜನ ಇತರ ಕಾಯಿಲೆಗಳಿಂದ ಬಳಲುತ್ತಿರುವುದಿಂದ ಹಬ್ಬ ಆಚರಿಸುತ್ತಿಲ್ಲ. ಅಲ್ಲದೆ, ಉದ್ಯೋಗ ಕಳೆದುಕೊಂಡು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಜನರ ಪ್ರಮಾಣ ಸುಮಾರು 2-3 ಪ್ರತಿಶತದಷ್ಟಿದೆ ಎಂದು ಸಮೀಕ್ಷೆ ಹೇಳಿದೆ.
ಪಟಾಕಿ ಹೊಡೆಯುವ ಕುರಿತು ಕೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ, ಶೇ. 45 ರಷ್ಟು ನಾಗರಿಕರು ತಾವು ಯಾವುದೇ ತರಹದ ಪಟಾಕಿಗಳನ್ನು ಹಚ್ಚುವುದಿಲ್ಲ ಎಂದು ಹೇಳಿದರು. ಆದರೆ, ಶೇಕಡಾ 15 ರಷ್ಟು ಜನರು ಹಸಿರು ಪಟಾಕಿಗಳನ್ನು ಹೊಡೆಯುವುದಾಗಿ ಹೇಳಿದ್ರು. ಶೇ.11ರಷ್ಟು ಜನರು ಕೇವಲ ಸ್ಪಾರ್ಕಲ್ಸ್ಗಳನ್ನು ಹಚ್ಚುವುದಾಗಿ ತಿಳಿಸಿದ್ದಾರೆ. ಶೇ. 6 ರಷ್ಟು ಸಾಮಾನ್ಯ ಪಟಾಕಿಗಳನ್ನು ಹಚ್ಚುವುದಾಗಿ ಹೇಳಿದ್ದಾರೆ ಎಂದು ಅದು ಹೇಳಿದೆ.
ಸುಮಾರು 5 ಪ್ರತಿಶತ ಜನರು ತಮ್ಮ ನಗರ/ಜಿಲ್ಲೆಯಲ್ಲಿ ಪಟಾಕಿಗಳನ್ನು ನಿಷೇಧಿಸಿರುವುದರಿಂದ ನಮಗೆ ಪಟಾಕಿ ಹೊಡೆಯುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಆದರೆ ಶೇಕಡಾ 10 ರಷ್ಟು ಜನರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮತ್ತು ಶೇಕಡಾ 8 ಜನರು ಇದು ನಮಗೆ "ಅನ್ವಯಿಸುವುದಿಲ್ಲ" ಅಥವಾ ಈ ವರ್ಷ ದೀಪಾವಳಿಯನ್ನು ಆಚರಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ದೀಪಾವಳಿಯಲ್ಲಿ ಏಕೆ ಪಟಾಕಿ ಹೊಡೆಯುವುದಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಶೇಕಡಾ 31 ರಷ್ಟು ಜನರು ಮಾಲಿನ್ಯವನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ, ಆದರೆ ಶೇಕಡಾ 15 ರಷ್ಟು ಜನರು ತಮ್ಮ ಕುಟುಂಬದವರಿಗೆ ಪಟಾಕಿ ಹೊಡೆಯುವುದು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ. ಶೇಕಡಾ 13 ರಷ್ಟು ಜನರು ಪಟಾಕಿಗಾಗಿ ಹಣ ಖರ್ಚು ಮಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಸಮೀಕ್ಷೆ ನಡೆಸಿದ 42 ಪ್ರತಿಶತ ಕುಟುಂಬಗಳು ಪಟಾಕಿ ನಿಷೇಧದ ಪರವಾಗಿವೆ ಎಂದು ಸಮೀಕ್ಷೆ ತನ್ನ ವರದಿಯಲ್ಲಿ ಸೇರಿಸಿದೆ.