ಮೀರತ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮೀರತ್ ಜಿಲ್ಲೆಯ 1987ರ ಮಲಿಯಾನ ಹಿಂಸಾಚಾರ ಪ್ರಕರಣದಲ್ಲಿ 40 ಜನ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮೀರತ್ ಜಿಲ್ಲಾ ನ್ಯಾಯಾಲಯ-6ರ ನ್ಯಾಯಾಧೀಶ ಲಖ್ವಿಂದರ್ ಸೂದ್ ಅವರು ಶನಿವಾರ ಮಹತ್ವದ ಆದೇಶ ಹೊರಡಿಸಿದ್ದಾರೆ.
36 ವರ್ಷಗಳ ಹಿಂದೆ ಅಂದರೆ, 1987ರ ಮೇ 23ರಂದು ನಡೆದ ಗಲಭೆಯಲ್ಲಿ ಒಂದು ಕೋಮಿನ 72 ಮಂದಿ ಸಾವನ್ನಪ್ಪಿದ್ದರು. ಇದೇ ವೇಳೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬೆಂಕಿ ಹಚ್ಚುವುದು, ಹೊಡೆದಾಟ ಮತ್ತು ಸಾಕಷ್ಟು ಗುಂಡಿನ ದಾಳಿಯಿಂದ ಹಿಂಸಾಚಾರ ನಡೆದಿತ್ತು. ಇದು ಕೇವಲ ಉತ್ತರ ಪ್ರದೇಶ ಮಾತ್ರವಲ್ಲದೇ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೇ ಸಂದರ್ಭದಲ್ಲಿ ನಿರ್ದಿಷ್ಟ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಒಟ್ಟು 93 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. 36 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇದುವರೆಗೆ 23 ಆರೋಪಿಗಳು ಸಾವನ್ನಪ್ಪಿದ್ದಾರೆ. ಇದೀಗ 40 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಇನ್ನುಳಿದ 30 ಜನರ ವಿರುದ್ಧದ ವಿಚಾರಣೆ ಬಾಕಿ ಇದೆ.
ಆರೋಪಿಗಳು ಖುಲಾಸೆ: ಹಿಂಸಾಚಾರ ಪ್ರಕರಣಕ್ಕೆ ಕುರಿತು ನ್ಯಾಯಾಲಯದಲ್ಲಿ ಫಿರ್ಯಾದಿ ಸೇರಿದಂತೆ 10 ಮಂದಿ ಸಾಕ್ಷ್ಯ ನುಡಿದಿದ್ದಾರೆ. ಆದರೆ, ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಪ್ರಸ್ತುತಪಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಲಿಲ್ಲ. ಹೀಗಾಗಿ 40 ಮಂದಿಯನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.
800 ಬಾರಿ ವಿಚಾರಣೆ: 1986ರ ಮೇ 22ರಂದು ಮೀರತ್ ಜಿಲ್ಲೆಯ ಹಾಶಿಂಪುರದಲ್ಲಿ ಗಲಭೆ ಉಂಟಾಗಿತ್ತು. ನಂತರ ಮಲಿಯಾನ ಪಟ್ಟಣಕ್ಕೂ ಹಬ್ಬಿ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಹಿಂಸಾಚಾರ ಸಂದರ್ಭದಲ್ಲಿ ರಾಜೀವ್ ಗಾಂಧಿ ದೇಶದ ಪ್ರಧಾನಿಯಾಗಿದ್ದರು. ಹತ್ಯೆಗಳ ಕುರಿತು ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. ಇದರ ನಂತರ, ಸಿಬಿಐ 1987ರ ಜೂನ್ 18ರಂದು ತನಿಖೆ ಪ್ರಾರಂಭಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಇಲ್ಲಿಯವರೆಗೆ 800 ಬಾರಿ ಈ ಪ್ರಕರಣದ ವಿಚಾರಣೆ ನಡೆದಿದೆ.
ಹತ್ಯಾಕಾಂಡದಲ್ಲಿ ಗಲಭೆಕೋರರೊಂದಿಗೆಗೆ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ಸಿಬ್ಬಂದಿಯೂ ಭಾಗಿಯಾಗಿದ್ದಾರೆ ಎಂಬ ಆರೋಪವಿತ್ತು. ಇದೇ ವಿಷಯದ ಕುರಿತು 2022ರಲ್ಲಿ ಹಿರಿಯ ಪತ್ರಕರ್ತ ಕುರ್ಬಾನ್ ಅಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹತ್ಯೆಗಳಲ್ಲಿ ಪಿಎಸಿ ಪಾತ್ರದ ಬಗ್ಗೆ ಎಸ್‌ಐಟಿ ತನಿಖೆಗೆ ಒತ್ತಾಯಿಸಿದ್ದರು. ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.
ಇದನ್ನೂ ಓದಿ: ಅಜಂ ಖಾನ್ ಮನೆಯೊಳಗೆ ಮಾಟ ಮಂತ್ರದ ವಸ್ತು ಎಸೆದ ವ್ಯಕ್ತಿ ಅರೆಸ್ಟ್: ನಾಲ್ವರು ಪೊಲೀಸರು ಸಸ್ಪೆಂಡ್