ಪಾಟ್ನಾ (ಬಿಹಾರ): ರಾಜ್ಯದಲ್ಲಿ ಭಾನುವಾರ ಸಿಡಿಲು ಮತ್ತು ಗುಡುಗು ಸಹಿತ ಸುರಿದ ಭಾರೀ ಮಳೆಗೆ 17 ಜನ ಸಾವನ್ನಪ್ಪಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಬಳಿಕ ಮೃತರ ಪ್ರತಿಯೊಬ್ಬರ ಕುಟುಂಬಕ್ಕೆ 4 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದರು.
ಗುಡುಗು ಮತ್ತು ಸಿಡಿಲು ಸಹಿತ ಮಳೆಯಿಂದಾಗಿ ಭಾಗಲ್ಪುರದಲ್ಲಿ 6, ವೈಶಾಲಿಯಲ್ಲಿ 3, ಖಗಾರಿಯಾದಲ್ಲಿ 2, ಕತಿಹಾರ್‌ನಲ್ಲಿ 1, ಸಹರ್ಸಾದಲ್ಲಿ 1, ಮಾಧೇಪುರದಲ್ಲಿ 1, ಬಂಕಾದಲ್ಲಿ 2 ಮತ್ತು ಮುಂಗಾರಿನಲ್ಲಿ 1 ಜನರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಸಿಎಂ ನಿತೀಶ್ ಕುಮಾರ್ ಮೃತರ ಕುಟುಂಬಗಳಿಗೆ ತಕ್ಷಣವೇ 4 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಎಂದು ಟ್ವೀಟ್ ಮೂಲಕ ಹೇಳಿದರು.
ಓದಿ: ಸಿಡಿಲು ಬಡಿದು ಒಂದೇ ಕುಟುಂಬದ ನಾಲ್ವರು ದಾರುಣ ಸಾವು, ಭೂಕುಸಿತಕ್ಕೆ ವ್ಯಕ್ತಿ ಬಲಿ
ಪ್ರತಿಕೂಲ ವಾತಾವರಣದಲ್ಲಿ ಜನರು ಸಂಪೂರ್ಣ ಜಾಗರೂಕತೆ ವಹಿಸಬೇಕು. ಗುಡುಗು ಸಹಿತ ಮಳೆಯಾದಾಗ ವಿಪತ್ತು ನಿರ್ವಹಣಾ ಇಲಾಖೆ ನೀಡುವ ಸಲಹೆಗಳನ್ನು ಅನುಸರಿಸಬೇಕು ಎಂದು ಅವರು ಮನವಿ ಮಾಡಿದರು. ನೈಋತ್ಯ ಮಾನ್ಸೂನ್ ಪ್ರದೇಶದಿಂದಾಗಿ ಗುಜರಾತ್, ಮಧ್ಯಪ್ರದೇಶ, ವಿದರ್ಭದ ಉಳಿದ ಭಾಗಗಳು, ಛತ್ತೀಸ್‌ಗಢದ ಕೆಲವು ಭಾಗಗಳು, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರದ ಕೆಲವು ಭಾಗಗಳಿಗೆ ಮತ್ತಷ್ಟು ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ತಿಳಿಸಿದೆ.
ಮುಂದಿನ ಎರಡು - ಮೂರು ದಿನಗಳಲ್ಲಿ ಉತ್ತರ, ಮಧ್ಯ ಮತ್ತು ಪೂರ್ವ ಭಾರತದಾದ್ಯಂತ ಭಾರೀ ಮಳೆಯೊಂದಿಗೆ ಚಂಡಮಾರುತದ ಚಟುವಟಿಕೆ ಮುಂದುವರಿಯುವ ಸಾಧ್ಯತೆಯಿದೆ. ಶನಿವಾರದಂದು IMD ತನ್ನ ಪ್ರಕಟಣೆಯಲ್ಲಿ ಮುಂದಿನ ಕೆಲವು ದಿನಗಳಲ್ಲಿ ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಡಿಲು ಮತ್ತು ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು.