ಬೇತಿಯಾ, ಬಿಹಾರ: ವಿಷಕಾರಿ ಮದ್ಯಸೇವನೆ ಮಾಡಿದ ಆರೋಪದಲ್ಲಿ, ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಸಾವಿನ ಪ್ರಮಾಣ ಹೆಚ್ಚಳವಾಗಿದ್ದು, ಒಟ್ಟು ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಬಿಹಾರ ಪಶ್ಚಿಮ ಚಂಪಾರಣ್ ಜಿಲ್ಲೆಯ ಲೌರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಕುರಿತು ಪಶ್ಚಿಮ ಚಂಪಾರಣ್ನ ಜಿಲ್ಲಾ ಸಾರ್ವಜನಿಕರ ಸಂಪರ್ಕಾಧಿಕಾರಿ ಕಚೇರಿಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಲೌರಿಯಾದ ಜನತೆ ಮಾಧ್ಯಮಗಳೊಂದಿಗೆ ಮಾತನಾಡಿ ವಿಷಕಾರಿ ಮದ್ಯವೇ ಜನರ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ. ಲೌರಿಯಾದಲ್ಲಿ ಮಾರಾಟ ಮಾಡಲಾಗುತ್ತಿದ್ದ ವಿಷಕಾರಿ ಮದ್ಯದಿಂದಲೇ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸ್ಥಳೀಯ ನಿವಾಸಿಯಾದ ಭೋಲಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕಾಗಿ ಪೊಲೀಸರು ತಂಡವನ್ನು ರಚಿಸಿಕೊಂಡಿದ್ದು, ಶ್ವಾನ ದಳದ ಮೂಲಕ ಘಟನೆ ನಡೆದ ಸುತ್ತಮುತ್ತಲಿನ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ.
ಎಲ್ಲರೂ ಜಾಗೃತರಾಗಿರಬೇಕು. ತಾವು, ತಮ್ಮ ಕುಟುಂಬದವರು ಮತ್ತು ಬೇರೆಯವರು ಮದ್ಯ ಸೇವನೆ ಮಾಡುವುದನ್ನು ಪ್ರೋತ್ಸಾಹಿಸಬಾರದು ಎಂದು ಪೊಲೀಸ್ ಇಲಾಖೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಹಿಂದೆಗೆಯುವುದಿಲ್ಲ, ಪಕ್ಷ ಬಲಪಡಿಸುತ್ತೇನೆ : ಸಿಎಂ ಬಿಎಸ್ವೈ