ಮುಂಬೈ: ಕಪ್ಪು ಶಿಲೀಂಧ್ರ (Black Fungus)ಕ್ಕೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳ ಬೆಲೆಯನ್ನು ಕೇಂದ್ರ ಸರ್ಕಾರ ತಗ್ಗಿಸಬೇಕು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಒತ್ತಾಯಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ ನಂತರ ಟೋಪೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲು ಬಳಸುವ ಪ್ರಮುಖ ಔಷಧ ಆಂಫೊಟೆರಿಸಿನ್-ಬಿ ದುಬಾರಿಯಾಗಿದೆ. ಒಂದು ಚುಚ್ಚುಮದ್ದಿನ ಬೆಲೆ ಸುಮಾರು 6,000 ರೂ. ಇದ್ದು ಈ ಔಷಧಿಗಳ ಬೆಲೆಯನ್ನು ರಾಜ್ಯಗಳು ನಿರ್ಧರಿಸಲು ಸಾಧ್ಯವಿಲ್ಲ. ಈ ಕುರಿತಾಗಿ ಈಗಾಗಲೇ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರಕ್ಕೆ ಬೆಲೆ ಕಡಿಮೆ ಮಾಡುವಂತೆ ಪತ್ರ ಬರೆದಿರುವುದಾಗಿ ತೋಪೆ ತಿಳಿಸಿದರು.
ರಾಜ್ಯದಲ್ಲಿ 1,500 ಕೋವಿಡ್ ರೋಗಿಗಳಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳಿವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ, ಮಧುಮೇಹ ಮತ್ತು ರಕ್ತದಲ್ಲಿ ಅಧಿಕ ಕಬ್ಬಿಣದ ಮಟ್ಟ ಹೊಂದಿರುವ ರೋಗಿಗಳಲ್ಲಿ ಮರಣ ಪ್ರಮಾಣವೂ ಹೆಚ್ಚಾಗಿದೆ ಎಂದು ಸಚಿವರು ಇದೇ ವೇಳೆ ಹೇಳಿದರು.
ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರವು ದೇಶೀಯ ಔಷಧ ಕಂಪನಿಗಳನ್ನು ಕೇಳಿದೆ ಎಂದು ಹೇಳಿದರು.
ತಲೆನೋವು, ಜ್ವರ, ಕಣ್ಣುಗಳ ಕೆಳಗೆ ನೋವು, ಮೂಗಿನ ಅಥವಾ ಸೈನಸ್ ದಟ್ಟಣೆ ಮತ್ತು ಭಾಗಶಃ ದೃಷ್ಟಿ ಕಳೆದುಕೊಳ್ಳುವುದು ಕಪ್ಪು ಶಿಲೀಂಧ್ರ ಎಂದು ಕರೆಯಲ್ಪಡುವ ಮ್ಯೂಕೋರ್ಮೈಕೋಸಿಸ್ನ ಲಕ್ಷಣಗಳಾಗಿವೆ.
ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿವೆ ಕಪ್ಪು ಶಿಲೀಂಧ್ರ ಸೋಂಕಿನ ಪ್ರಕರಣಗಳು.. ಲಕ್ಷಣಗಳೇನು... ಚಿಕಿತ್ಸೆ ಹೀಗಿದೆ!