ಮುಂಬೈ(ಮಹಾರಾಷ್ಟ್ರ): ಕೋವಿಡ್ ಸಂಕಷ್ಟದಿಂದ ಜನಸಾಮಾನ್ಯ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಸರಿಯಾಗಿ ವ್ಯಾಪಾರ ಹಾಗೂ ಕೆಲಸವಿಲ್ಲದೇ ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಶಾಲಾ-ಕಾಲೇಜ್ ಫೀಸ್ನಲ್ಲಿ ಶೇ. 15ರಷ್ಟು ಕಡಿತಗೊಳಿಸಿ ಮಹತ್ವದ ಆದೇಶ ಜಾರಿಗೊಳಿಸಲಾಗಿದ್ದು, ಪ್ರಸಕ್ತ ಸಾಲಿನ ಶ್ರೈಕ್ಷಣಿಕ ವರ್ಷದಿಂದಲೇ ಈ ಯೋಜನೆ ಜಾರಿಗೊಳ್ಳಲಿದೆ. ಒಂದು ವೇಳೆ ವಿದ್ಯಾರ್ಥಿಗಳು ಈಗಾಗಲೇ ಫೀಸ್ ಕಟ್ಟಿದ್ದರೇ, ಮುಂದಿನ ತಿಂಗಳು ಆಡಳಿತ ವಿಭಾಗ ಹಣ ವಾಪಸ್ ಮಾಡಬೇಕು. ಇಲ್ಲವೇ ಮುಂದಿನ ವರ್ಷ ಹಣ ಪಾವತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಶೇ. 15ರಷ್ಟು ರಿಯಾಯತಿ ನೀಡಬೇಕು ಎಂದು ತಿಳಿಸಿದೆ.
ಇದೇ ವಿಚಾರವಾಗಿ ಮಾತನಾಡಿರುವ ರಾಜ್ಯ ಶಿಕ್ಷಣ ಸಚಿವ ವರ್ಷಾ ಗಾಯ್ಕವಾಡ, ಪ್ರಸಕ್ತ ಶ್ರೈಕ್ಷಣಿಕ ವರ್ಷದಿಂದಲೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳ ಪೋಷಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ವಿವಿಧ ರಾಜ್ಯಗಳಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿರುವ ಕಾರಣ ಶಾಲಾ - ಕಾಲೇಜ್ಗಳು ಪುನಾರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣ ಕೇಂದ್ರಗಳತ್ತ ದಾಪುಗಾಲು ಹಾಕುತ್ತಿದ್ದಾರೆ.
ಮಹಾರಾಷ್ಟ್ರದ ಖಾಸಗಿ ಶಾಲೆಗಳು ಮತ್ತು ಸರ್ಕಾರದ ಅನುದಾನ ರಹಿತ ಶಾಲೆಗಳು ಕೂಡ ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿದ್ದು, ಈಗಾಗಲೇ ಪ್ರಕಟಣೆ ಸಹ ಹೊರಡಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ ಕಡಿಮೆಯಾಗಿದ್ದ ಕಾರಣ ಆಗಸ್ಟ್ 17ರಿಂದ ಶಾಲೆಗಳನ್ನ ಪುನಾರಂಭ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇದೀಗ ಸೋಂಕು ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಬಿಡಲಾಗಿದೆ.