ಅರಾರಿಯಾ: ಕಠ್ಮಂಡು ಮೂಲಕ ಭಾರತದ ಗಡಿಯೊಳಗೆ ತರಲಾಗುತ್ತಿದ್ದ ಯುರೇನಿಯಂ ಅನ್ನು ನೇಪಾಳ ಪೊಲೀಸರು ಇಂಡೋ-ನೇಪಾಳ ಗಡಿಯಲ್ಲಿ ವಶಪಡಿಸಿಕೊಂಡಿದ್ದಾರೆ. ಯುರೇನಿಯಂ ಸಾಗಾಟ ಮಾಡುತ್ತಿದ್ದ 15 ಕಳ್ಳಸಾಗಣೆದಾರರನ್ನು ಬಂಧಿಸಲಾಗಿದ್ದು, ಅವರಿಂದ 2 ಕೆಜಿ ಯುರೇನಿಯಂ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾಗಿರುವ ಯುರೇನಿಯಂ ಪರಮಾಣು ಬಾಂಬ್ ತಯಾರಿಕೆಗೆ ಬಳಸಬಹುದಾದ ಯುರೇನಿಯಂ ಆಗಿದೆ. ಯರೇನಿಯಂನೊಂದಿಗೆ ಇನ್ನೂ ಹಲವಾರು ಅನುಮಾನಾಸ್ಪದ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಯುರೇನಿಯಂ ನಂಥ ಸರಕುಗಳನ್ನು ಭಾರತದ ಗಡಿಯೊಳಗೆ ಸಾಗಿಸಲು ಯುವಕರಿಗೆ ದೊಡ್ಡ ಮೊತ್ತದ ಹಣ ನೀಡಲಾಗುತ್ತದೆ ಎನ್ನಲಾಗಿದೆ. ಯುರೇನಿಯಂ ಕಳ್ಳಸಾಗಣೆ ಜಾಲ ಬೆಳಕಿಗೆ ಬಂದ ನಂತರ ಭಾರತೀಯ ಭದ್ರತಾ ಏಜೆನ್ಸಿಗಳು ಮತ್ತು ಎಸ್ಎಸ್ಬಿ ಸಿಬ್ಬಂದಿ ಗಡಿಯಲ್ಲಿ ಮತ್ತಷ್ಟು ಅಲರ್ಟ್ ಆಗಿದ್ದಾರೆ.
ಬಿಹಾರದ ಅರಾರಿಯಾ ಜಿಲ್ಲೆಯ ಜೋಗಬನಿ ಗಡಿಯ ಸುತ್ತಮುತ್ತಲಿನ ಯಾವುದಾದರೊಂದು ಪ್ರದೇಶದಿಂದ ಕಳ್ಳಸಾಗಣೆದಾರರು ಭಾರತದೊಳಕ್ಕೆ ಪ್ರವೇಶಿಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ಈ ಯುರೇನಿಯಂ ಏನಾದರೂ ದೇಶವಿರೋಧಿಗಳ ಕೈಗೆ ಸಿಕ್ಕರೆ ಇದನ್ನು ಸ್ಫೋಟಕಗಳ ತಯಾರಿಕೆಗೆ ಕೂಡ ಬಳಸಬಹುದಾಗಿತ್ತು. 1 ಕೆಜಿ ಯುರೇನಿಯಂ 24 ಮೆಗಾವ್ಯಾಟ್ ಶಕ್ತಿಯನ್ನು ಉತ್ಪಾದಿಸುತ್ತದೆ. ವರದಿಯ ಪ್ರಕಾರ, ಹಿರೋಷಿಮಾ ಮತ್ತು ನಾಗಾಸಾಕಿಯಲ್ಲಿ 64 ಕೆಜಿ ಯುರೇನಿಯಂ ಅನ್ನು ಸ್ಫೋಟಿಸಲಾಗಿತ್ತು.
ಅಂದರೆ 2 ಕೆಜಿ ಯುರೇನಿಯಂ ಕೂಡ ಅದೆಷ್ಟು ವಿನಾಶ ತರಬಹುದು ಎಂಬುದನ್ನು ಕಲ್ಪಿಸಿಕೊಳ್ಳಬಹುದು. ಆರೋಪಿಗಳು ಈ ಸರಕನ್ನು ಯಾರಿಗೆ ತಲುಪಿಸಲಿದ್ದರು ಎಂಬ ಬಗ್ಗೆ ಭದ್ರತಾ ಪಡೆಗಳು ತನಿಖೆ ಆರಂಭಿಸಿದ್ದಾರೆ. ವಶಪಡಿಸಿಕೊಂಡ ಯುರೇನಿಯಂ ಅನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. 2 ಕೆಜಿ ಯುರೇನಿಯಂ ಅದೆಷ್ಟೋ ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎನ್ನಲಾಗಿದೆ.