ಜಮ್ಶೆಡ್‌ಪುರ (ಜಾರ್ಖಂಡ್) : ಜೈಲು ಗಲಭೆಯಲ್ಲಿ ಕೈದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಭಾಗಿಯಾಗಿದ್ದ 15 ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಇದೇ ಗಲಭೆಯಲ್ಲಿ ಭಾಗಿಯಾದ ಇತರ 10 ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಜೂನ್ 25, 2019 ರಂದು ಘೀಘಡೀಹ್ ಕೇಂದ್ರ ಕಾರಾಗೃಹದಲ್ಲಿ ನಡೆದ ಪ್ರಕರಣದಲ್ಲಿ 15 ಆರೋಪಿಗಳಿಗೆ ಜೆಮ್‌ಶೆಡ್‌ಪುರ ಜಿಲ್ಲೆಯ ನ್ಯಾ. ರಾಜೇಂದ್ರ ಸಿನ್ಹಾ ಪೀಠ ಮರಣದಂಡನೆ ವಿಧಿಸಿದೆ.
ಜೆಮ್‌ಶೆಡ್‌ಪುರದ ಪರ್ಸುದಿಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘೀಘಡೀಹ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಮನೋಜ್ ಸಿಂಗ್ ಅವರನ್ನು 2019 ರ ಜೂನ್ 25 ರಂದು ಹತ್ಯೆ ಮಾಡಲಾಗಿತ್ತು.
ಮನೋಜ್ ಸಿಂಗ್ ವರದಕ್ಷಿಣೆ ಕಿರುಕುಳ ಮತ್ತು ಪತ್ನಿಯ ಹತ್ಯೆಗಾಗಿ 10 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಜೂನ್ 25 ರಂದು ಜೈಲಿನೊಳಗೆ ಎರಡು ಗುಂಪುಗಳ ನಡುವೆ ಪ್ರಾಬಲ್ಯ ಸ್ಥಾಪಿಸಲು ಘರ್ಷಣೆ ನಡೆದಿದ್ದು, ತೀವ್ರ ಜಗಳ ನಡೆದು ಮನೋಜ್ ಸಿಂಗ್ ಸಾವಿಗೀಡಾಗಿದ್ದರು.
ಶ್ಯಾಮು ಜೋಜೋ, ಪಂಚನನ್ ಪಾತ್ರೋ, ಪಿಂಕು ಪೂರ್ಣಿ, ಅಜಯ್ ಮಲ್ಲಾ, ಅರೂಪ್ ಕುಮಾರ್ ಬೋಸ್ , ರಾಮ್ ರೈ ಸೂರಿನ್, ರಾಮೈ ಕರುವಾ, ಗಂಗಾಧರ್ ಖಂಡೈತ್, ರಾಮೇಶ್ವರ್ ಅಂಗರಿಯಾ, ಗೋಪಾಲ್ ತಿರಿಯಾ, ಶರತ್ ಗೋಪ್, ವಾಸುದೇವ್ ಮಹ್ತೋ, ಜಾನಿ ಅನ್ಸಾರಾ, ಶಿವ ಶಂಕರ್ ಪಾಸ್ವಾನ್ ಮತ್ತು ಸಂಜಯ್ ಡಿಗ್ಗಿ ಮರಣಂಡನೆಗೆ ಗುರಿಯಾದವರು.
ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳೆಂದರೆ ಶೋಯೆಬ್ ಅಖ್ತರ್, ಮೊ ತೌಕಿರ್, ಅಜಿತ್ ದಾಸ್, ಸೋನು ಲಾಲ್, ಸುಮಿತ್ ಸಿಂಗ್, ರಿಷಿ ಲೋಹರ್ ಮತ್ತು ಸೌರಭ್ ಸಿಂಗ್ ಸೇರಿದ್ದಾರೆ.
ಕೊಲೆಯಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಈ ಹಿಂದೆಯೂ ವಾರಂಟ್ ಹೊರಡಿಸಲಾಗಿತ್ತು. ಆದರೆ, ಅವರನ್ನು ಪತ್ತೆ ಮಾಡಲು ಪೊಲೀಸರಿಗೆ ಈವರೆಗೂ ಸಾಧ್ಯವಾಗಿಲ್ಲ. ಇದೀಗ ನ್ಯಾಯಾಲಯವು ಇಬ್ಬರೂ ಆರೋಪಿಗಳ ವಾರಂಟ್‌ಗಳನ್ನು ಪೂರೈಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರ ಕೊಲೆ ಯತ್ನ ನಾಟಕ.. ನಿಜಾಂಶ ತಿಳಿದು ವಾರ್ಡನ್, ಪೊಲೀಸರು ತಬ್ಬಿಬ್ಬು