ಗುವಾಹಟಿ: ಅಗರ್ತಲಾ - ನವದೆಹಲಿ ವಿಶೇಷ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ, ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ 14 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಇವರು ರೋಹಿಂಗ್ಯಾ ಸಮುದಾಯಕ್ಕೆ ಸೇರಿರಬಹುದೆಂದು ಈಶಾನ್ಯ ಗಡಿನಾಡು ರೈಲ್ವೆ ವಕ್ತಾರರು ಶಂಕೆ ವ್ಯಕ್ತಪಡಿಸಿದ್ದಾರೆ.
ರೈಲ್ವೆಯ ಭದ್ರತಾ ಸಹಾಯವಾಣಿ 182 ಸಹಾಯದಿಂದ ಅವರನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ. ನವೆಂಬರ್ 24 ರಂದು, ರೈಲ್ವೆ ಸಂರಕ್ಷಣಾ ಪಡೆಯ ಅಲಿಪುರ್ದುರ್ ಸೆಕ್ಯುರಿಟಿ ಕಂಟ್ರೋಲ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಪ್ರಯಾಣಿಕರು, ಈ 14 ಜನರಿಂದ ಸಂಭವನೀಯ ದುಷ್ಕೃತ್ಯದ ಕುರಿತು ಕರೆ ಮಾಡಿ ಮಾಹಿತಿ ನೀಡಿದ್ದರು. ನಂತರ ಆರ್ಪಿಎಫ್ ಅಧಿಕಾರಿಗಳು ಕತಿಹಾರ್ ವಿಭಾಗದ ನ್ಯೂ ಜಲ್ಪೈಗುರಿಯಲ್ಲಿ ತಮ್ಮ ಸಹವರ್ತಿಗಳಿಗೆ ಈ ವಿಷಯವನ್ನು ತಿಳಿಸಿದ್ದು, ಮುಂದಿನ ನಿಗದಿತ ನಿಲುಗಡೆಯಲ್ಲಿ ಆ 14 ಜನರನ್ನು ಬಂಧಿಸಲಾಯಿತು.
ಇದನ್ನು ಓದಿ: ಪಾಕ್ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ಇಬ್ಬರು ಯೋಧರು ಹುತಾತ್ಮ
ಬಳಿಕ ಅವರನ್ನು ವಿಚಾರಿಸಿದ್ದು, ನಕಲಿ ಹೆಸರುಗಳೊಂದಿಗೆ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಮಾಹಿತಿ ತಿಳಿದು ಬಂದಿದೆ. ವಿಚಾರಣೆಯ ವೇಳೆ ಅವರು, ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿರುವ ನಿರಾಶ್ರಿತರ ಶಿಬಿರದಿಂದ ಹೊರಬಂದು ಭಾರತಕ್ಕೆ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ ಅಂತಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಸದ್ಯ ಈ ಕುರಿತು ವಿದೇಶಿಯರ (ತಿದ್ದುಪಡಿ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ವ್ಯಕ್ತಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನಂತರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.