ಕಾನ್ಪುರ( ಉತ್ತರಪ್ರದೇಶ): ರಕ್ತಪೂರಣಕ್ಕೆ ಒಳಗಾಗಿರುವ ಹದಿನಾಲ್ಕು ಮಕ್ಕಳು ಹೆಪಟೈಟಿಸ್ ಬಿ, ಸಿ ಮತ್ತು ಎಚ್‌ಐವಿಯಂತಹ ಸೋಂಕುಗಳಿಗೆ ತುತ್ತಾಗಿದ್ದಾರೆ ಎಂದು ಕಾನ್ಪುರದ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ, ಅಪ್ರಾಪ್ತ ವಯಸ್ಕರು ಈಗ ತಲಸ್ಸೇಮಿಯಾ ಸ್ಥಿತಿಯ ಜೊತೆಗೆ ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಲಾಲಾ ಲಜಪತ್ ರಾಯ್ (ಎಲ್‌ಎಲ್‌ಆರ್) ಆಸ್ಪತ್ರೆಯಲ್ಲಿ ಈ ಘಟನೆ ವರದಿಯಾಗಿದೆ. ರಕ್ತ ಪಡೆದು, ಅನಾರೋಗ್ಯ ಪೀಡಿತರಿಗೆ ನೀಡುವಾಗ ನಡೆಯುವ ಕಾರ್ಯದ ವೇಳೆ ಉಂಟಾದ ಯಡವಟ್ಟಿನಿಂದಾಗಿ ಇಂತಹ ಅಪಾಯ ಎದುರಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೂ ಸೋಂಕಿನ ಮೂಲವು ಹೀಗಿರಬಹುದು ಎಂದು ಗುರುತಿಸುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರೆ. ಎಲ್‌ಎಲ್‌ಆರ್‌ನ ಮಕ್ಕಳ ವಿಭಾಗದ ಮುಖ್ಯಸ್ಥ ಮತ್ತು ಈ ಕೇಂದ್ರದ ನೋಡಲ್ ಅಧಿಕಾರಿ ಅರುಣ್ ಆರ್ಯ ಮಾತನಾಡಿ, ರಕ್ತ ನೀಡಿದ ಬಳಿಕ ಮಕ್ಕಳಲ್ಲಿ ಎಚ್ಐವಿ ಪಾಸಿಟಿವ್, ಹೆಪಟೈಟಿಸ್ ಬಿ ಸೋಂಕು ಪತ್ತೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಇದು ರಕ್ತ ವರ್ಗಾವಣೆಯ ಸಂದರ್ಭದಲ್ಲಿನ ಅಪಾಯಗಳನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
"ನಾವು ಹೆಪಟೈಟಿಸ್ ರೋಗಿಗಳನ್ನು ಗ್ಯಾಸ್ಟ್ರೋಎಂಟರಾಲಜಿ ವಿಭಾಗಕ್ಕೆ ಮತ್ತು ಎಚ್ಐವಿ ರೋಗಿಗಳನ್ನು ಕಾನ್ಪುರದ ರೆಫರಲ್ ಸೆಂಟರ್ಗೆ ತೆರಳುವಂತೆ ಸೂಚಿಸಿದ್ದೇವೆ‘‘ ಎಂದು ಅವರು ಹೇಳಿದರು. ಪ್ರಸ್ತುತ, 180 ಥಲಸ್ಸೆಮಿಯಾ ರೋಗಿಗಳು ಈ ಕೇಂದ್ರದಲ್ಲಿ ರಕ್ತ ಹಾಕಿಸಿಕೊಂಡಿದ್ದಾರೆ. ಇನ್ನು ಪ್ರತಿ ಆರು ತಿಂಗಳಿಗೊಮ್ಮೆ ಯಾವುದೇ ವೈರಲ್ ಕಾಯಿಲೆಗಳಿಗೆ ಇಲ್ಲಿ ತಪಾಸಣೆ ಮಾಡಲಾಗುತ್ತದೆ. 14 ಮಕ್ಕಳು ಖಾಸಗಿ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ಸ್ಥಳೀಯವಾಗಿ ಅವರಿಗೆ ತುರ್ತು ಅಗತ್ಯತೆಗೆ ಅನುಗುಣವಾಗಿ ರಕ್ತ ಪಡೆದುಕೊಂಡಿರುತ್ತಾರೆ.
ಥಲಸ್ಸೆಮಿಯಾವು ಆನುವಂಶಿಕವಾಗಿ ಬರುವ ರಕ್ತದ ಕಾಯಿಲೆಯಾಗಿದ್ದು, ದೇಹವು ಕೆಂಪು ರಕ್ತ ಕಣಗಳ ಪ್ರಮುಖ ಭಾಗವಾದ ಹಿಮೋಗ್ಲೋಬಿನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸದಿದ್ದಾಗ ಈ ಕಾಯಿಲೆ ಉಂಟಾಗುತ್ತದೆ. ಇದು ಚಿಕಿತ್ಸೆ ನೀಡಬಹುದಾದ ರೋಗವಾಗಿದ್ದು, ಹೀಗಾಗಿ ಇದರ ನಿವಾರಣೆಗೆ ರಕ್ತವನ್ನು ನೀಡಲಾಗುತ್ತದೆ. ಇನ್ನು ಚೆಲೇಶನ್ ಥೆರಪಿ ಮೂಲಕವೂ ಈ ರೋಗಕ್ಕೆ ಚಿಕಿತ್ಸೆ ನೀಡಬಹುದಾಗಿದೆ ಎಂದು ಅರುಣ್ ಆರ್ಯ ಹೇಳಿದ್ದಾರೆ. "ಮಕ್ಕಳು ಈಗಾಗಲೇ ಗಂಭೀರ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ ಮತ್ತು ಈಗ ಹೆಚ್ಚಿನ ಆರೋಗ್ಯದ ಅಪಾಯದಲ್ಲಿದ್ದಾರೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಏನಿದು ವಿಂಡೋ ಅವಧಿ?: ಯಾರಾದರೂ ರಕ್ತದಾನ ಮಾಡಿದಾಗ, ರಕ್ತವು ಬಳಕೆಗೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ರಕ್ತದ ಪರೀಕ್ಷೆ ನಡೆಸಿ, ಖಚಿತಪಡಿಸಿಕೊಳ್ಳಲಾಗುತ್ತದೆ. ಆದಾಗ್ಯೂ, ಯಾರಾದರೂ ಸೋಂಕಿಗೆ ಒಳಗಾದ ನಂತರ ಪರೀಕ್ಷೆಗಳಿಂದ ವೈರಸ್ ಅನ್ನು ಪತ್ತೆಹಚ್ಚಲು ಸಾಧ್ಯವಾಗದ ಅವಧಿ ಇದೆ. ಇದನ್ನೇ "ವಿಂಡೋ ಅವಧಿ" ಎಂದು ಕರೆಯಲಾಗುತ್ತದೆ ಎಂದು ವಿವರಿಸಿರುವ ವೈದ್ಯ ಅರುಣ್, "ಹರಟೆಯ ಸಮಯದಲ್ಲಿ ವೈದ್ಯರು ಮಕ್ಕಳಿಗೆ ಹೆಪಟೈಟಿಸ್ ಬಿ ವಿರುದ್ಧ ಲಸಿಕೆ ಹಾಕಿರಬೇಕು" ಎಂದಿದ್ದಾರೆ.
180 ರೋಗಿಗಳಲ್ಲಿ 14 ಮಕ್ಕಳು 6 ರಿಂದ 16 ವರ್ಷ ವಯಸ್ಸಿನವರಾಗಿದ್ದಾರೆ. ಸೋಂಕಿತ ಮಕ್ಕಳಲ್ಲಿ ಏಳು ಮಂದಿ ಹೆಪಟೈಟಿಸ್ ಬಿ, ಐವರು ಹೆಪಟೈಟಿಸ್ ಸಿ ಮತ್ತು ಇಬ್ಬರಿಗೆ ಎಚ್‌ಐವಿ ಪಾಸಿಟಿವ್ ಬಂದಿದೆ ಎಂದು ಆರ್ಯ ಹೇಳಿದರು. ಕಾನ್ಪುರ ಸಿಟಿ, ದೇಹತ್, ಫರೂಕಾಬಾದ್, ಔರೈಯಾ, ಇಟಾವಾ ಮತ್ತು ಕನೌಜ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಮಕ್ಕಳು ಇಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮದ ಅಡಿ ಸೋಂಕಿನ ಮೂಲವನ್ನು ಪತ್ತೆಹಚ್ಚುತ್ತಾರೆ. ಈ ತಂಡವು ಹೆಪಟೈಟಿಸ್ ಮತ್ತು ಎಚ್‌ಐವಿ ಸೋಂಕಿನ ಸ್ಥಳವನ್ನು ಹುಡುಕುತ್ತದೆ ಎಂದು ಉತ್ತರ ಪ್ರದೇಶ ರಾಷ್ಟ್ರೀಯ ಆರೋಗ್ಯ ಮಿಷನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಐಎಎನ್ಎಸ್)