ನವದೆಹಲಿ : ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿಯಲ್ಲಿ ನಡೆದಿದ್ದ ಹಿಮ ನದಿ ದುರಂತದ ಸಾವು-ನೋವುಗಳ ಬಗ್ಗೆ ಈಗಲೂ ವರದಿಯಾಗುತ್ತಿದೆ. ಇನ್ನೂ ಸುಮಾರು 130 ಮಂದಿ ಕಾಣೆಯಾಗಿದ್ದು, ಸುಳಿವಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.
ಲೋಕಸಭೆಯಲ್ಲಿ ಇಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾದ ನಿತ್ಯಾನಂದರಾಯ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ದುರಂತಕ್ಕೆ ಸಂಬಂಧಿಸಿದಂತೆ ಪರಿಣಿತರ ಜಂಟಿ ಅಧ್ಯಯನ ತಂಡ ರಚಿಸಿದೆ. ಈ ತಂಡದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಶೈಕ್ಷಣಿಕ ಸಂಸ್ಥೆಗಳ, ವಿವಿಧ ಸಂಘಟನೆಗಳ ಸದಸ್ಯರಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಬಣ್ಣ ಹಚ್ಚಲಿ ಬಿಡಿ, ಶೀಘ್ರದಲ್ಲೇ ಅಳಿಸಿಹೋಗಲಿದೆ : ಕಮಲ್ ಹಾಸನ್ ಸಂದರ್ಶನ
ಈ ತಂಡ ಹಿಮ ಪ್ರವಾಹದಿಂದ ರಿಷಿಗಂಗಾ ಮತ್ತು ದೌಲಿಗಂಗಾ ನದಿಗಳ ಪ್ರದೇಶದಲ್ಲಿ ಆದ ನಷ್ಟವನ್ನು ಅಧ್ಯಯನ ಮಾಡುವುದು ಮಾತ್ರವಲ್ಲದೇ, ಇಂತಹ ಘಟನೆಗಳನ್ನು ಭವಿಷ್ಯದಲ್ಲಿ ತಡೆಯುವುದು ಹೇಗೆ ಎಂಬ ಬಗ್ಗೆಯೂ ಕೂಡ ವರದಿ ನೀಡಲಿದೆ ಎಂದಿದ್ದಾರೆ.
ದುರಂತದಲ್ಲಿ 74 ಮಂದಿಯ ಮೃತದೇಹ ಪತ್ತೆಯಾಗಿವೆ. ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ ಎಂದು ನಿತ್ಯಾನಂದ ರಾಯ್ ಮಾಹಿತಿ ನೀಡಿದ್ದಾರೆ.
ಉತ್ತರಾಖಂಡ ಸರ್ಕಾರವೂ ಕೂಡ ದುರಂತಕ್ಕೆ ಸಂಬಂಧಿಸಿದಂತೆ ಸಮಿತಿಯೊಂದನ್ನ ರಚಿಸಿದೆ. ಹಿಮ ಪ್ರವಾಹದ ಪರಿಣಾಮಗಳ ಬಗ್ಗೆ ಸಮಿತಿಯು ವರದಿ ನೀಡಲಿದೆ.