ನವದೆಹಲಿ: ಕರ್ನಾಟಕದಲ್ಲಿ ಎರಡು ರೂಪಾಂತರ ಒಮಿಕ್ರಾನ್ ಸೋಂಕಿತ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಭಾರತಕ್ಕೂ ದಕ್ಷಿಣ ಆಫ್ರಿಕಾದ ವೈರಸ್ ಲಗ್ಗೆ ಹಾಕಿದೆ. ಇದರ ಬೆನ್ನಲ್ಲೇ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ 12 ಶಂಕಿತ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಿಖರವಾದ ಯಾವುದೇ ರೀತಿಯ ಫಲಿತಾಂಶ ಲಭ್ಯವಾಗಿಲ್ಲ.
ಕೋವಿಡ್-19 ಸೋಂಕು ಕಾಣಿಸಿಕೊಂಡಿರುವ ಕಾರಣ ನಿನ್ನೆ ದೆಹಲಿಯ ಲೋಕ ನಾಯಕ ಜಯಪ್ರಕಾಶ ಆಸ್ಪತ್ರೆಯಲ್ಲಿ 8 ಮಂದಿ ದಾಖಲಾಗಿದ್ದು, ಇದರ ಬೆನ್ನಲ್ಲೇ ಇವತ್ತು ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಇವರ ಕೋವಿಡ್ ವರದಿ ಇಲ್ಲಿಯವರೆಗೆ ಹೊರಬಂದಿಲ್ಲ.
ಇವರೆಲ್ಲರೂ ಕಳೆದ ಮೂರು ದಿನಗಳ ಹಿಂದೆ ಅಂತಾರಾಷ್ಟ್ರೀಯ ವಿಮಾನದ ಮೂಲಕ ದೆಹಲಿಗೆ ಆಗಮಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇವರ ಸ್ವ್ಯಾಬ್ ಪಡೆದುಕೊಂಡು ಈಗಾಗಲೇ ಜೀನೋಮ್ ಸೀಕ್ವೆನ್ಸಿಂಗ್ ಸ್ಯಾಂಪಲ್ಸ್ ರವಾನೆ ಮಾಡಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ವರದಿ ವೈದ್ಯರ ಕೈಸೇರುವ ಸಾಧ್ಯತೆ ಇದೆ.
ಇದನ್ನೂ ಓದಿರಿ: 6 ವರ್ಷದಲ್ಲಿ 3 ಲಕ್ಷ ಮಕ್ಕಳು ನಾಪತ್ತೆ : ಸದನದಲ್ಲಿ ಮಾಹಿತಿ ನೀಡಿದ ಸಚಿವೆ ಇರಾನಿ
ಆಸ್ಪತ್ರೆಗೆ ದಾಖಲಾಗಿರುವವರ ಪೈಕಿ ನಾಲ್ವರು ಲಂಡನ್ ಹಾಗೂ ಫ್ರಾನ್ಸ್ನಿಂದ ಬಂದಿದ್ದು, ಉಳಿದವರು ಬೆಲ್ಜಿಯಂ ಹಾಗೂ ಥಾನ್ಜಿಯಾದಿಂದ ಆಗಮಿಸಿದ್ದಾರೆ ಎಂದು ಲೋಕ ನಾಯಕ ಜಯ ಪ್ರಕಾಶ್ ಆಸ್ಪತ್ರೆ ವೈದ್ಯಕೀಯ ಡೈರೆಕ್ಟರ್ ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಲವ್ ಅಗರವಾಲ್, ಕರ್ನಾಟಕದಲ್ಲಿ ಎರಡು ಒಮಿಕ್ರಾನ್ ಕೇಸ್ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಕಠಿಣ ಮಾರ್ಗಸೂಚಿ ಜಾರಿಗೊಳಿಸಲಾಗಿದೆ.