ಆಗ್ರಾ(ಉತ್ತರಪ್ರದೇಶ): ಉತ್ತರಪ್ರದೇಶ ಆಗ್ರಾದಲ್ಲಿನ ಕೇಂದ್ರ ಕಾರಾಗೃಹದ 12 ಕೈದಿಗಳು 10ನೇ ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪಾಸಾಗಿ ಅಚ್ಚರಿ ಮೂಡಿಸಿದ್ದಾರೆ. 10ನೇ ತಗರತಿಯಲ್ಲಿ ಮೂವರು ಕೈದಿಗಳು ಪ್ರಥಮ ಶ್ರೇಣಿ ಪಡೆದರೆ, ಆರು ಮಂದಿ ದ್ವಿತೀಯ ಶ್ರೇಣಿ ಪಡೆದಿದ್ದಾರೆ. 12ನೇ ಕ್ಲಾಸ್ ಪರೀಕ್ಷೆಯಲ್ಲಿ ಮೂವರು ಕೈದಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
10 ಮತ್ತು 12 ನೇ ತಗಗತಿಯ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಉತ್ತರಪ್ರದೇಶ ಮಾಧ್ಯಮಿಕ ಶಿಕ್ಷಣ ಪರಿಷತ್ ಶನಿವಾರ ಪ್ರಕಟಿಸಿದೆ. ಇದರಲ್ಲಿ ಕೈದಿಗಳು ಕೂಡ ಪರೀಕ್ಷೆಗೆ ಕುಳಿತಿದ್ದರು. ಇಂದು ಫಲಿತಾಂಶ ಹೊರಬಿದ್ದಿದ್ದು, 12 ಕೈದಿಗಳು ಪ್ರಥಮ, ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
10ನೇ ತರಗತಿಯಲ್ಲಿ ಜಿತೇಂದ್ರ ಎಂಬ ಕೈದಿ ಶೇ.64.83 ಅಂಕ ಗಳಿಸಿದ್ದರೆ, ಅರ್ಜುನ್ ಮತ್ತು ಶೀಲೇಶ್ ಕ್ರಮವಾಗಿ ಶೇ.63.16 ಮತ್ತು ಶೇ.62.83 ಅಂಕ ಗಳಿಸಿ ಪ್ರಥಮ ಶ್ರೇಣಿ ಪಡೆದಿದ್ದಾರೆ. 12 ನೇ ತರಗತಿಯಲ್ಲಿ ಶಿಶುಪಾಲ್ ಸಿಂಗ್, ಹರಿಸಿಂಗ್ ಮತ್ತು ಜಿತೇಂದ್ರ ಎಂಬ ಕೈದಿ ದ್ವಿತೀಯ ಶ್ರೇಣಿಯಲ್ಲಿ ಪಾಸಾದ ಕೈದಿಗಳು.
ಓದಿಗಾಗಿ ಗ್ರಂಥಾಲಯ ಸೌಲಭ್ಯ: ಇದು ನಮಗೆ ಮತ್ತು ಜೈಲಲ್ಲಿರುವ ಕೈದಿಗಳಿಗೆ ಸಂತೋಷದ ಕ್ಷಣವಾಗಿದೆ. ಕಾರಣ ಕೈದಿಗಳ ದೃಢ ನಿರ್ಧಾರದಿಂದ ಜೈಲಿನ ಸರಳುಗಳ ಹಿಂದೆಯೇ ಕುಳಿತು ಶಿಕ್ಷಣ ಪಡೆದು ಪರೀಕ್ಷೆಯಲ್ಲಿ ಈಗ ಉತ್ತೀರ್ಣರಾಗಿದ್ದಾರೆ. ಇದು ಇತರ ಕೈದಿಗಳಿಗೂ ಪ್ರೇರಣೆ ನೀಡುತ್ತದೆ. ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಜೈಲಿನ ಅಧಿಕಾರಿ ವಿ.ಕೆ.ಸಿಂಗ್ ಹೇಳಿದ್ದಾರೆ.
ಜೈಲಿನಲ್ಲಿ ನಾವು ಕೈದಿಗಳಿಗೆ ಅಧ್ಯಯನಕ್ಕಾಗಿ ಗ್ರಂಥಾಲಯ ಸೌಲಭ್ಯವನ್ನು ಒದಗಿಸಿದ್ದೇವೆ. ಶಿಕ್ಷಣ ಪಡೆಯಬೇಕೆಂಬ ಇಚ್ಚೆ ಇರುವ ಕೈದಿಗಳಿಗೆ, ಕಾರಣಾಂತರದಿಂದ ಜೈಲುಪಾಲಾದ ಪದವೀಧರ ಶಿಕ್ಷಣ ಪಡೆದ ಕೈದಿಗಳಿಂದಲೇ ಇತರೆ ಕೈದಿಗಳಿಗೆ ಶಿಕ್ಷಣ ಕೊಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಓದಲು ಪ್ರೇರೇಪಿಸಿದ ಸಿನಿಮಾ: ಜೈಲಿನಲ್ಲಿ ದಸ್ವಿ ಎಂಬ ಸಿನಿಮಾ ಚಿತ್ರೀಕರಣದ ವೇಳೆ ಶಿಕ್ಷಣ ಮಹತ್ವವನ್ನು ಕಂಡು ಪ್ರೇರೇಪಿತನಾಗಿ ಶಿಕ್ಷಣ ಪಡೆಯಲು ಬಯಸಿದೆ. ಅಧಿಕಾರಿಗಳ ಸಹಾಯದಿಂದ ಕಂಬಿಗಳ ಹಿಂದೆಯೇ ಇಲ್ಲಿನ ಶಿಕ್ಷಿತ ಕೈದಿಗಳ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದು ಇದೀಗ 10ನೇ ತರಗತಿ ಪಾಸಾಗಿದ್ದೇನೆ ಎಂದು ಜಿತೇಂದ್ರ ಸಿಂಗ್ ಎಂಬ ಕೈದಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದಲ್ಲದೇ, ಇಲ್ಲಿನ ಕೆಲ ಕೈದಿಗಳು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ(ಇಗ್ನೋ) ಮತ್ತು ರಾಜರ್ಷಿ ಟಂಡನ್ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸ್ಗಳನ್ನು ಪಡೆದು ಅಧ್ಯಯನ ನಡೆಸುತ್ತಿದ್ದಾರೆ.
ಇದನ್ನೂ ಓದಿ: 'ಇದು ಸ್ಕೂಟರ್ ಅಲ್ಲ ಕತ್ತೆ' ಓವರ್ಲೋಡ್ ವಸ್ತು ತುಂಬಿಕೊಂಡು ರೈಡ್: ವಿಡಿಯೋ ನೋಡಿ