ಅಯೋಧ್ಯಾ(ಉತ್ತರ ಪ್ರದೇಶ): ಸರಯೂ ನದಿಯಲ್ಲಿ ಸ್ನಾನ ಮಾಡಲು ತೆರಳಿ ಮುಳುಗುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸುವ ಸಲುವಾಗಿ ತೆರಳಿದ ಎರಡು ಕುಟುಂಬದ ಸುಮಾರು ನಾಲ್ವರು ಸಾವನ್ನಪ್ಪಿ, ಆರು ಮಂದಿ ಕಾಣೆಯಾಗಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯಯಲ್ಲಿ ಶುಕ್ರವಾರ ನಡೆದಿದೆ.
ಮೃತರೆಲ್ಲರೂ ಆಗ್ರಾ ಮೂಲದವರಾಗಿದ್ದು, ಅಯೋಧ್ಯೆಗೆ ಪ್ರವಾಸ ಬಂದಿದ್ದರು. ಇದೇ ವೇಳೆ ಸರಯೂ ನದಿಯಲ್ಲಿ ಮಹಿಳೆ ಸ್ನಾನಕ್ಕೆ ಧಾವಿಸಿದ್ದು, ಅಲೆಯ ಹೊಡೆತಕ್ಕೆ ಸಿಲುಕಿದ್ದಾರೆ. ಇದನ್ನು ಕಂಡ ಎರಡೂ ಕುಟುಂಬದ ಸುಮಾರು 15 ಮಂದಿ ಆಕೆಯ ನೆರವಿಗೆ ಧಾವಿಸಿದ್ದು, ಎಲ್ಲರೂ ನೀರಿನಲ್ಲಿ ಸೆಳೆತಕ್ಕೆ ಸಿಲುಕಿದ್ದಾರೆ.
ಸ್ಥಳೀಯರು ಆರು ಮಂದಿಯನ್ನು ರಕ್ಷಿಸಿದ್ದು, ಉಳಿದವರು ನದಿಯಿಂದ ಹೊರಗೆ ಬಂದಿದ್ದಾರೆ. ಇಬ್ಬರು ಮಹಿಳೆಯರಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆರು ಮಂದಿ ನೀರುಪಾಲಾಗಿದ್ದು, ಅವರನ್ನು ಹುಡುಕಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸುತ್ತಿದೆ.
ಇದನ್ನೂ ಓದಿ: ಕರ್ನಾಟಕದ 10 ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಾಗಿದೆ: ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ
ಅಯೋಧ್ಯೆಯ ಗುಪ್ತಾರ್ ಘಾಟ್ ಮತ್ತು ರಾಜ್ ಘಾಟ್ ನಡುವಿನ ನದಿ ಪ್ರದೇಶದಲ್ಲಿ ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಸ್ಥಳದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ ಮತ್ತು ಇತರ ಅಧಿಕಾರಿಗಳು ಹಾಜರಿದ್ದಾರೆ.