ಖಾಂಡ್ವಾ (ಮಧ್ಯಪ್ರದೇಶ): ನರ್ಮದಾ ನದಿಯಲ್ಲಿ ಪ್ರಾಣ ಭಯದಲ್ಲಿ ಸಿಲುಕಿದ್ದ ಸುಮಾರು 12 ಜನ ಭಕ್ತರನ್ನು ಖಾಂಡ್ವಾ ಜಿಲ್ಲೆಯಲ್ಲಿಂದು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಇಲ್ಲಿನ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಲಾಗಿತ್ತು. ಇದರಿಂದ ಹರಿವು ಹೆಚ್ಚಾಗಿ ಹೊರಬರಲು ಸಾಧ್ಯವಾಗದೇ ನದಿಬಂಡೆಗಳ ಮೇಲೆ ಭಕ್ತರು ಸಿಲುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಂದೋರ್‌ನಿಂದ 12 ಮಂದಿ ಯುವಕರು ಖಾಂಡ್ವಾ ಜಿಲ್ಲೆಯ ಓಂಕಾರೇಶ್ವರನ ದರ್ಶನಕ್ಕೆ ಬಂದಿದ್ದರು. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಹರಿಯುವ ನರ್ಮದಾ ನದಿಗಿಳಿದು ಬಂಡೆಗಳ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದರು. ಆಗ ನರ್ಮದಾ ಜಲವಿದ್ಯುತ್ ಅಭಿವೃದ್ಧಿ ನಿಗಮ ನಿಯಮಿತ ಅಣೆಕಟ್ಟೆಯಿಂದ ನೀರು ಬಿಡುಗಡೆಗೊಳಿಸಿತ್ತು. ನೀರು ಹೆಚ್ಚಾಗುತ್ತಿರುವುದನ್ನು ಗಮನಿಸಿ ತಕ್ಷಣ ಎಚ್ಚೆತ್ತುಕೊಳ್ಳಲ್ಲದೇ ಇವರು ನದಿಯಲ್ಲಿ ಸಿಲುಕಿದ್ದರು. ಈ ವಿಷಯ ತಿಳಿದ ಬೋಟ್‌ಮೆನ್‌ಗಳು ಮತ್ತು ಗೃಹರಕ್ಷಕರು ದೋಣಿ ಮತ್ತು ಹಗ್ಗದ ಸಹಾಯದಿಂದ ಎಲ್ಲರನ್ನೂ ರಕ್ಷಿಸಿದ್ದಾರೆ.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಚಂದರ್ ಸಿಂಗ್ ಸೋಲಂಕಿ ಪ್ರತಿಕ್ರಿಯಿಸಿದ್ದು, ವಿದ್ಯುತ್ ಉತ್ಪಾದನೆಯ ಸಮಯದಲ್ಲಿ ನರ್ಮದಾ ಅಣೆಕಟ್ಟಿನಿಂದ ನೀರು ಬಿಡಲಾಗುತ್ತದೆ. ಇಂದು ಕೂಡ ಎಂದಿನಂತೆ ಸೈರನ್ ಮೊಳಗಿಸಿದ ನಂತರ ನೀರು ಬಿಡಲಾಗಿದೆ. ಆದರೆ, ಕೆಲವರು ನೀರಿನಿಂದ ಹೊರಬರದೆ ಬಂಡೆಗಳ ಮೇಲೆ ಸಿಲುಕಿಕೊಂಡಿದ್ದರು ಎಂದು ತಿಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಓಂಕಾರೇಶ್ವರ ದೇವಸ್ಥಾನದ ನಗರ ಘಾಟ್ನಲ್ಲಿ ಬೋಟ್‌ಮೆನ್‌ಗಳು ಮತ್ತು ಗೃಹರಕ್ಷಕರನ್ನು ನಿಯೋಜಿಸಲಾಗಿರುತ್ತದೆ. ಇಂದೂ ಸಹ ಅವರೇ ನದಿಯಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತ್ಯಕ್ಷದರ್ಶಿ ರಂಜೀತ್ ಭವಾರಿಯಾ ಮಾತನಾಡಿ, ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದರಿಂದ ಸ್ನಾನ ಮಾಡಲೆಂದು ಕೆಲವರು ದಡದಿಂದ 50-60 ಮೀಟರ್ ದೂರದವರೆಗೆ ಹೋಗಿದ್ದರು. ಆದರೆ, ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದ ನಂತರ ನೀರಿನ ಮಟ್ಟ ಏರಿತು. ಇದರಿಂದ ಭಯಗೊಂಡ ಅವರು ನೀರಿನ ಸೆಳೆತದಿಂದ ರಕ್ಷಿಸಿಕೊಳ್ಳಲು ಬಂಡೆಗಳ ಮೇಲೆ ನಿಂತಿದ್ದರು ಎಂದು ಮಾಹಿತಿ ನೀಡಿದರು. ಪ್ರಸಿದ್ಧವಾದ ಓಂಕಾರೇಶ್ವರ ದೇವಸ್ಥಾನಕ್ಕೆ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ಇದನ್ನೂ ಓದಿ: ಪ್ರವಾಸಿಗರ ಮೇಲೆ ಮುಗಿಬಿದ್ದ ಜೇನುನೊಣಗಳು; ಇಬ್ಬರು ಸಾವು, ಐವರಿಗೆ ಗಾಯ