ಚೆನ್ನೈ(ತಮಿಳುನಾಡು): 'ತಾಯಿಯ ಗರ್ಭ ಮತ್ತು ಸಮಾಧಿ ಇವೆರಡು ಮಾತ್ರ ಮಹಿಳೆಯರಿಗೆ ಸುರಕ್ಷಿತ'ವಾದ ಸ್ಥಳ..! ಇದ್ಯಾವುದೋ ಪುಸ್ತಕದ್ದೋ ಅಥವಾ ಸಿನಿಮಾ ಡೈಲಾಗ್ ಅಲ್ಲ. ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡ 11 ವರ್ಷದ ಬಾಲಕಿಯೊಬ್ಬಳು ಬರೆದಿಟ್ಟ ಡೆತ್ನೋಟ್ನಲ್ಲಿನ ಕರುಳು ಹಿಂಡುವ ಸಾಲುಗಳಿವು.
ಚೆನ್ನೈನ ಪೂನಮಲ್ಲಿ ಬಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಲೈಂಗಿಕ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ತಾಯಿ ಮತ್ತು ತಂದೆ ಕೆಲಸ ನಿಮಿತ್ತ ಹೊರಹೋದ ವೇಳೆ ವಿದ್ಯಾರ್ಥಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಷ್ಟು ಸಮಯವಾದರೂ ಬಾಗಿಲು ಮಗಳು ಬಾಗಿಲು ತೆಗೆಯದೇ ಇದ್ದಾಗ ಪೋಷಕರು ಆತಂಕಗೊಂಡು ನೋಡಿದಾಗ ವಿದ್ಯಾರ್ಥಿನಿ ಸಾವನ್ನಪ್ಪಿದ್ದು ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಸಮಾಜದಲ್ಲಿ ನಾವು ಯಾರನ್ನೂ ನಂಬಲಾಗದು. ಶಿಕ್ಷಕರು, ಸಂಬಂಧಿಕರನ್ನು ಎಂದಿಗೂ ನಂಬಬೇಡಿ. ಹೆಣ್ಣಿಗೆ ತಾಯಿಯ ಗರ್ಭ ಮತ್ತು ಸಮಾಧಿ ಮಾತ್ರ ಸುರಕ್ಷಿತವಾದ ಸ್ಥಳವಾಗಿವೆ.
ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ತಪ್ಪಿಸಿಕೊಂಡು ಹೋಗುವಾಗ ಸ್ಕೈವಾಕ್ನಿಂದ ಬಿದ್ದು ಸಾವು
ಸಮಾಜದಲ್ಲಿ ಹೆಣ್ಣು ಮಕ್ಕಳು ಬದುಕುವುದೇ ಕಷ್ಟವಾಗಿದೆ. ನನ್ನ ಸಾವಿಗೆ ನ್ಯಾಯ ಸಿಗಬೇಕು. ಪ್ರತಿ ತಂದೆ - ತಾಯಿ ತಮ್ಮ ಗಂಡು ಮಕ್ಕಳಿಗೆ ಹೆಣ್ಣನ್ನು ಗೌರವಿಸುವುದನ್ನು ಹೇಳಿ ಕೊಡಬೇಕು. ನನಗೆ ಮಾನಸಿಕ ಹಿಂಸೆಯಿಂದಾಗಿ ರಾತ್ರಿ ನಿದ್ದೆಯನ್ನೇ ಕಳೆದುಕೊಂಡಿದ್ದೆ ಎಂದು ತನ್ನ ನೋವು ಮತ್ತು ಹತಾಶೆಯನ್ನು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ.
ಶಾಲಾ ವಿದ್ಯಾರ್ಥಿಯ ಬಂಧನ
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆ ವಿದ್ಯಾರ್ಥಿ, ಬಾಲಕಿಯನ್ನು ದೈಹಿಕ ಸಂಪರ್ಕಕ್ಕಾಗಿ ಪದೆ ಪದೇ ಪೀಡಿಸುತ್ತಿದ್ದ. ಇದರಿಂದ ವಿದ್ಯಾರ್ಥಿನಿ ಮಾನಸಿಕವಾಗಿ ಕುಗ್ಗಿದ್ದಳು ಎಂದು ಗೊತ್ತಾಗಿದೆ. ಇನ್ನು ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.