ಡೆಹ್ರಾಡೂನ್ (ಉತ್ತರಾಖಂಡ): ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಅಲ್ಲಿನ ಜನರ ಸ್ಥಿತಿ ಹೇಳತೀರದ್ದಾಗಿದೆ. ತಾಲಿಬಾನ್ ಪಡೆಗಳಿಗೆ ಹೆದರಿ ಅಲ್ಲಿನ ಬಹುತೇಕ ಭದ್ರತಾ ಕಂಪನಿಗಳು ಮುಚ್ಚಿವೆ. ಇದರಿಂದಾಗಿ ಅಲ್ಲಿ ವಾಸವಿದ್ದ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಫ್ಘನ್ನಲ್ಲಿ ವಾಸಿಸುತ್ತಿರುವ ಉತ್ತರಾಖಂಡದ 114 ನಿವಾಸಿಗಳು ವಿಡಿಯೋವೊಂದನ್ನು ಮಾಡಿದ್ದು, ಭಾರತಕ್ಕೆ ಬರಲು ಸಹಾಯ ಮಾಡುವಂತೆ ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಾಬೂಲ್ನಲ್ಲಿ 114 ಮಂದಿ ಒಂದು ಸಣ್ಣಕೋಣೆಯಲ್ಲಿ ಜೀವಿಸುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಊಟವಿಲ್ಲ, ಮಲಗಲು ಜಾಗವಿಲ್ಲ. ದಯವಿಟ್ಟು ನಾವು ಭಾರತಕ್ಕೆ ಬರಲು ಸಹಾಯ ಮಾಡಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಾವು ಕೆಲಸ ಮಾಡುತ್ತಿದ್ದ ಕಂಪನಿಯು ನಮ್ಮನ್ನು ನಡುನೀರಲ್ಲಿ ಕೈ ಬಿಟ್ಟಿದೆ. ಮೂರ್ನಾಲ್ಕು ದಿನಗಳಿಂದ ಊಟ ಮಾಡಿಲ್ಲ. ಭಾರಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದೇವೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಅವರು ಭಾರತದ ಸರ್ಕಾರದ ರಾಯಭಾರ ಕಚೇರಿಯನ್ನು ನಿರಂತರವಾಗಿ ಸಂಪರ್ಕಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾಬೂಲ್ನಲ್ಲಿರುವ ಭಾರತೀಯರಿಗೆ ತಾಲಿಬಾನ್ ಸುರಕ್ಷತೆಯ ಭರವಸೆ ನೀಡಿದೆ: ಮಂಜಿಂದರ್ ಸಿಂಗ್