ವಡೋದರಾ: ಗುಜರಾತ್‌ನ ವಡೋದರದ ದಾರ್ಜಿಪುರ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಮಂಗಳವಾರ ಕಾರುಗಳನ್ನು ಸಾಗಿಸುತ್ತಿದ್ದ ಕಂಟೇನರ್ ವಾಹನಕ್ಕೆ (ಎಚ್‌ಎಂವಿ) ಆಟೋರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪ ಪೊಲೀಸ್ ಕಮಿಷನರ್ ಪನ್ನಾ ಮೊಮಯ, ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ಸೂರತ್‌ನಿಂದ ಅಹಮದಾಬಾದ್ ಕಡೆಗೆ ಚಲಿಸುತ್ತಿದ್ದ ಕಂಟೇನರ್ ವಾಹನದ ಚಾಲಕ ಕಾರನ್ನು ತಪ್ಪಿಸಲು ಪ್ರಯತ್ನಿಸುವಾಗ ಸ್ಟೀರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಕಂಟೇನರ್ ಡಿವೈಡರ್ ದಾಟಿ ಪ್ರಯಾಣಿಕರ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಇಲ್ಲಿಯವರೆಗೆ 11 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮೂರರಿಂದ ನಾಲ್ಕು ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ನಂತರ ಕಂಟೈನರ್ ವಾಯುಪಡೆ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದು ನಿಂತಿತು. ನಿಲ್ದಾಣದ ತಂಡವೂ ರಕ್ಷಣಾ ಕಾರ್ಯದಲ್ಲಿ ನೆರವಾಗಿದೆ. ಕಂಟೈನರ್ ಅಡಿ ಪ್ರಯಾಣಿಕರ ರಿಕ್ಷಾ ಸಿಲುಕಿ ನಜ್ಜುಗುಜ್ಜಾಗಿದೆ. ಅಗ್ನಿಶಾಮಕ ತಂಡವು ಆಟೋದ ಉಕ್ಕನ್ನು ಕತ್ತರಿಸಿ ಪ್ರಯಾಣಿಕರನ್ನು ಹೊರತೆಗೆಯಲು ಕಟರ್‌ಗಳನ್ನು ಬಳಸಬೇಕಾಯಿತು. ಮೊದಲು ನಾಲ್ಕು ಮಂದಿಯನ್ನು ನಂತರ ಆರು ಕೊನೆಗೆ ಮೂರು ಮಂದಿಯನ್ನು ಹೊರತೆಯಲಾಯಿತು. ಎಲ್ಲರೂ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದರು ಎಂದು ಅಗ್ನಿಶಾಮಕ ಅಧಿಕಾರಿ ಅಮಿತ್ ಚೌಧರಿ ತಿಳಿಸಿದರು.
ಇದನ್ನೂ ಓದಿ: ಬಸ್, ಜೀಪ್ ಡಿಕ್ಕಿ: ಐವರು ಸ್ಥಳದಲ್ಲೇ ಸಾವು