ಸೂರತ್ (ಗುಜರಾತ್): ಮಾರ್ಚ್ ಅಂತ್ಯದ ವೇಳೆಗೆ ಸೂರತ್ನಲ್ಲಿ ಕೋವಿಡ್ ಸೋಂಕು ನೂರಾರು ಜನರಿಗೆ ತಗುಲಿತ್ತು. ಪರಿಸ್ಥಿತಿ ತುಂಬಾ ಹದಗೆಟ್ಟು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆ ಕೊರತೆ ಎದುರಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಸಂಘ-ಸಂಸ್ಥೆಗಳು ಐಸೋಲೇಶನ್ ಕೇಂದ್ರ, ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಮುಂದೆ ಬಂದವು. ಇವುಗಳು ರೋಗಿಗಳಿಗೆ ಉಚಿತ ಔಷಧ, ಆಮ್ಲಜನಕ ಮತ್ತು ಆಹಾರವನ್ನು ಪೂರೈಸಿದವು.
ಸೋಂಕಿನ ಸರಪಳಿಯನ್ನು ತುಂಡರಿಸಲು ಸುಮಾರು 30 ಐಸೋಲೇಶನ್ ಕೇಂದ್ರಗಳನ್ನು ನಗರದಲ್ಲಿ ತೆರೆಯಲಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಐಸೋಲೇಶನ್ ಸೆಂಟರ್ಗಳ ನೋಡಲ್ ಅಧಿಕಾರಿಯಾಗಿ ನೇಮಕಗೊಂಡರು.
ದಕ್ಷ ನಿರ್ವಹಣೆಯಿಂದ ಯಶಸ್ಸು:
ಕೋವಿಡ್ ಸೋಂಕು ಗರಿಷ್ಠ ಮಟ್ಟಕ್ಕೆ ತಲುಪಿದ್ದ ಸಮಯದಲ್ಲಿ 30 ಐಸೋಲೇಶನ್ ಸೆಂಟರ್ಗಳ 1,500 ಬೆಡ್ಗಳ ಪೈಕಿ 950 ಬೆಡ್ಗಳು ರೋಗಿಗಳಿಂದ ಭರ್ತಿಯಾಗಿದ್ದವು. ಆದರೆ, ಈಗ 954 ವೆಂಟಿಲೇಟರ್ ಬೆಡ್ಗಳು ಮತ್ತು 543 ಆಕ್ಸಿಜನ್ ಬೆಡ್ಗಳು ಖಾಲಿ ಇವೆ. ಎಲ್ಲಾ 30 ಐಸೋಲೇಶನ್ ಸೆಂಟರ್ಗಳಲ್ಲಿದ್ದ ಸೋಂಕಿತರ ಪೈಕಿ ಎಲ್ಲರೂ ಚೇತರಿಸಿಕೊಂಡಿದ್ದು, ಯಾವುದೇ ಸಾವು ಸಂಭವಿಸದಿರುವುದು ಖುಷಿ ವಿಚಾರ. ಅಧಿಕಾರಿಗಳು ಮತ್ತು ಸಿಬ್ಬಂದಿಯ ದಕ್ಷ ನಿರ್ವಹಣೆಯಿಂದಾಗಿ ಸೂರತ್‌ನ ಎಲ್ಲಾ ಕೋವಿಡ್ ಐಸೋಲೇಶನ್ ಸೆಂಟರ್ಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ನೋಡಲ್ ಅಧಿಕಾರಿ ದಿನೇಶ್ ರಬಾರಿ ಹೇಳಿದ್ದಾರೆ.
ಕೋವಿಡ್ ಸಮರ ಗೆದ್ದಿದ್ದು ಹೇಗೆ?
ಐಸೋಲೇಶನ್ ಸೆಂಟರ್ಗಳಲ್ಲಿ ಪ್ರತಿಯೊಬ್ಬ ರೋಗಿಗೂ ಸರಿಯಾದ ಚಿಕಿತ್ಸೆ ನೀಡಲಾಯಿತು. ಯಾವುದೇ ರೋಗಿಯ ಆರೋಗ್ಯ ಸ್ಥಿತಿ ಹದಗೆಟ್ಟರೆ ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸುವ ಕೆಲಸ ಮಾಡಲಾಯಿತು. ಸದ್ಯ, ಐಸೋಲೇಶನ್ ಕೇಂದ್ರಗಳಲ್ಲಿ ಕೇವಲ 188 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಸಂಪೂರ್ಣ ಚೇತರಿಸಿಕೊಂಡ ಸುಮಾರು 3000 ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗಿದೆ. ಪ್ರಸ್ತುತ 47 ಆಕ್ಸಿಜನ್ ಬೆಡ್ಗಳು ಮಾತ್ರ ಬಳಕೆಯಲ್ಲಿದ್ದು, ಉಳಿದವುಗಳು ಖಾಲಿಯಿದೆ. ಪ್ರತಿ ಕೇಂದ್ರಕ್ಕೂ ಆಮ್ಲಜನಕ ಪೂರೈಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ.
ಎಲ್ಲೆಲ್ಲಿಂದ ರೋಗಿಗಳಿದ್ದರು?
ಪ್ರಸ್ತುತ, 525 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 380 ಮಂದಿ ಸೂರತ್‌ನವರಾಗಿದ್ದು, ಇನ್ನುಳಿದ 145 ರೋಗಿಗಳು ಹೊರಗಿನವರು. ಸೌರಾಷ್ಟ್ರದ ರೋಗಿಗಳು ಮತ್ತು ಇತರ ರಾಜ್ಯಗಳಿಂದ ವಲಸೆ ಬಂದವರು ಕೂಡ ಈ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ಮತ್ತು ಸಂಪೂರ್ಣವಾಗಿ ಚೇತರಿಸಿಕೊಂಡ ರೋಗಿಗಳಲ್ಲಿ ಉತ್ತರಾಖಂಡ, ಕೊಲ್ಕತ್ತಾ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ರಾಜಸ್ಥಾನದವರು ಸೇರಿದ್ದಾರೆ.
ದೈಹಿಕ ಮಾತ್ರವಲ್ಲ ಮಾನಸಿಕ ಚಿಕಿತ್ಸೆಯೂ ಇಲ್ಲಿ ಲಭ್ಯ :
ಕೆಲವು ಐಸೋಲೇಶನ್ ಕೇಂದ್ರಗಳಲ್ಲಿ ಆಡಿಯೋ ವಿಶುವಲ್ ಸ್ಕ್ರೀನ್ಗಳನ್ನು ಅಳವಡಿಸಲಾಗಿದ್ದು, ಅದರ ಮೂಲಕ ಧಾರ್ಮಿಕ ಮತ್ತು ಇತರ ಕಾರ್ಯಕ್ರಮಗಳನ್ನು ತೋರಿಸಲಾಗುತ್ತಿದೆ. ಕೆಲವು ಕೇಂದ್ರಗಳಲ್ಲಿ ಯೋಗ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಮತ್ತು ರೋಗಿಗಳಿಗೆ ಓದಲು ಪುಸ್ತಕದ ವ್ಯವಸ್ಥೆಯನ್ನೂ ಮಾಡಲಾಗಿದೆ. ಸೋಂಕು ಮುಕ್ತರಾದವರ ಪೈಕಿ ವೃದ್ದರು, ಯುವಕರು ಸೇರಿದ್ದಾರೆ.