ಚೆನ್ನೈ: ಗ್ರೇಟರ್ ಚೆನ್ನೈ ಕಾರ್ಪೊರೇಶನ್ನಲ್ಲಿ ಪೌರ ಕಾರ್ಮಿಕರಾಗಿ ಕೆಲಸಮಾಡುತ್ತಿದ್ದ ಮಹಿಳೆಯೊಬ್ಬರು ತ್ಯಾಜ್ಯ ಸಂಗ್ರಹಿಸುವ ವೇಳೆ ತನ್ನ ಕೈಗೆ ಸಿಕ್ಕ 100 ಗ್ರಾಂ ಚಿನ್ನದ ನಾಣ್ಯವನ್ನು ಮರಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮೇರಿ ಪ್ರಾಮಾಣಿಕತೆ ಮೆರೆದ ಮಹಿಳೆ. ಇವರು ಕಸ ವಿಲೇವಾರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ತಿರುವಟ್ಟಿಯೂರು ಬೀದಿಯಲ್ಲಿ ವಿವಿಧ ಮನೆಗಳಿಂದ ಸಂಗ್ರಹಿಸಿದ ಕಸವನ್ನು ವಿಂಗಡಿಸುತ್ತಿದ್ದಾಗ ನಾಣ್ಯ ಕೆಳಗೆ ಬಿದ್ದ ಶಬ್ದ ಕೇಳಿಸಿದೆ. ತಕ್ಷಣ ಪರಿಶೀಲಿಸಿದಾಗ ಅದು ಚಿನ್ನದ ನಾಣ್ಯ ಎಂದು ತಿಳಿದುಬಂದಿದೆ.
ಗಣೇಶ್ ರಾಮನ್ ಅವರು ಆಯುಧ ಪೂಜೆಗೆ ನಾಣ್ಯ ಇಟ್ಟಿದರು. ಪೂಜೆ ಮುಗಿದ ಬಳಿಕ ಸ್ಥಳ ಸ್ವಚ್ಛಗೊಳಿಸುವ ವೇಳೆ ಕುಟುಂಬಸ್ಥರು ಪ್ಯಾಕ್ ಮಾಡಿದ್ದ ನಾಣ್ಯವನ್ನು ತ್ಯಾಜ್ಯದ ತೊಟ್ಟಿಗೆ ಎಸೆದಿದ್ದಾರೆ. ಈ ಕುರಿತು ರಾಮನ್ ಸಾತಂಗಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೇರಿ ಚಿನ್ನದ ನಾಣ್ಯವನ್ನು ಪೊಲೀಸ್ ಠಾಣೆಗೆ ನೀಡಲು ಹೋದಾಗ, ಇದು ರಾಮನ್ ಅವರ ಬಂಗಾರದ ಕಾಯಿನ್ ಎಂದು ತಿಳಿದುಬಂದಿದೆ. ಪೊಲೀಸರು ಮತ್ತು ಗಣೇಶ್ ರಾಮನ್ ಅವರು ಮೇರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ 100 ಗ್ರಾಂ ಬಂಗಾರದ ನಾಣ್ಯ ಮಾಲೀಕರ ಕೈಸೇರಿದೆ.