ಚೈಬಸ (ಜಾರ್ಖಂಡ್): ಮಾರ್ಚ್ 4ರಂದು ಟೋಕ್ಲೊ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಸ್ಫೋಟ ನಡೆಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ 10 ನಕ್ಸಲರನ್ನು ಜಾರ್ಖಂಡ್ ಪೊಲೀಸರು ಚೈಬಾಸಾ ವಲಯದಲ್ಲಿ ಬಂಧಿಸಿದ್ದಾರೆ. ಈ ವೇಳೆ ಮೂವರು ಪೊಲೀಸರು ಪ್ರಾಣ ಕಳೆದುಕೊಂಡಿದ್ದಾರೆ.
ಸ್ಫೋಟ ನಡೆಸುವ ಮೊದಲು ಭದ್ರತಾ ಪಡೆಗಳ ಚಲನವಲನದ ಬಗ್ಗೆ ಅಧ್ಯಯನ ನಡೆಸಿದ್ದರು ಎಂಬುದನ್ನು ಬಂಧಿತ ನಕ್ಸಲರು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
"ಮಾರ್ಚ್ 4 ರಂದು ನಡೆಸಲಾದ ಐಇಡಿ ಸ್ಫೋಟದಲ್ಲಿ ಜಾರ್ಖಂಡ್ ಪೊಲೀಸ್ ದಳದ ಜಗ್ವಾರ್ ತಂಡದ ಮೂವರು ಯೋಧರು ಹುತಾತ್ಮರಾಗಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ 10 ನಕ್ಸಲರನ್ನು ಬಂಧಿಸಲಾಗಿದ್ದು, ಇವರೆಲ್ಲರೂ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಅಲ್ಲದೇ ಇವರೆಲ್ಲರೂ ಐಇಡಿ ಮತ್ತು ಕ್ಲೇಮೋರ್ ಸ್ಫೋಟ ನಡೆಸುವ ಬಗ್ಗೆ ಪರಿಣತಿ ಹೊಂದಿದ್ದರು." ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ನಕ್ಸಲರು ಭದ್ರತಾ ಪಡೆಗಳ ಮಾರ್ಗದಲ್ಲಿ ಐಇಡಿ ಇಟ್ಟು ಕಾಯುತ್ತಿದ್ದರು. ಆ ಪೈಕಿ ಓರ್ವ ಮರವನ್ನೇರಿ ಉಳಿದವರಿಗೆ ಸೂಚನೆ ನೀಡುತ್ತಿದ್ದ. ಸ್ಪೋಟದ ನಂತರ ಎಲ್ಲರೂ ಕಾಡಿನಲ್ಲಿ ತಪ್ಪಿಸಿಕೊಂಡಿದ್ದರು. ಸ್ಫೋಟದ ನಂತರ ನಕ್ಸಲರನ್ನು ಹುಡುಕಲು ಜಿಲ್ಲಾ ಪೊಲೀಸರು ಮತ್ತು ತಾಂತ್ರಿಕ ತಂಡಗಳನ್ನು ರಚಿಸಲಾಗಿತ್ತು.
ಓದಿ: ಶೋಪಿಯಾನ್ ಎನ್ಕೌಂಟರ್ : ಓರ್ವ ಭಯೋತ್ಪಾದಕ ಹತ
ಈ ತಂಡ ಪ್ರಮುಖ ನಕ್ಸಲ್ ರಾಮರಾಯ್ ಹನ್ಸ್ಡಾ ಎಂಬಾತನನ್ನು ಮೊದಲಿಗೆ ಬಂಧಿಸಲಾಗಿತ್ತು. ಆತ ಸ್ಫೋಟದ ಸಂಪೂರ್ಣ ಯೋಜನೆ ಮತ್ತು ಸ್ಫೋಟದಲ್ಲಿ ಭಾಗಿಯಾಗಿರುವ ಇತರರು ಇರುವ ಸ್ಥಳವನ್ನು ಬಹಿರಂಗಪಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.