ಬೆಂಗಳೂರು: ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ಇದೇ ವರ್ಷ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆಸಿದ್ದು ಸೇರಿದಂತೆ, ಕನಿಷ್ಠ 12 ಭಯೋತ್ಪಾದನಾ ಪ್ರಕರಣಗಳ ಮಾಸ್ಟರ್ ಮೈಂಡ್ ಆಗಿರುವ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.
ಪಂಜಾಬ್‌ನಲ್ಲಿ ಖಲಿಸ್ತಾನಿ ಭಯೋತ್ಪಾದನೆಯ ಹೊಸ ಮುಖ ಎಂದು ಹೇಳಲಾದ ರಿಂಡಾ, ಪಾಕಿಸ್ತಾನದಲ್ಲಿ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಆಶ್ರಯದಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ ಮತ್ತು ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ)ನ ಸ್ವಯಂ ಘೋಷಿತ ಮುಖ್ಯಸ್ಥನಾಗಿದ್ದಾನೆ ಈತ. ಈ ವರ್ಷ ಮೇ 5 ರಂದು ಹರಿಯಾಣದ ಬಸ್ತಾರಾ ಟೋಲ್ ಪ್ಲಾಜಾದಿಂದ ಐಇಡಿಗಳೊಂದಿಗೆ ನಾಲ್ವರು ಶಂಕಿತ ಭಯೋತ್ಪಾದಕರನ್ನು ಬಂಧಿಸಿದ ಪ್ರಕರಣದಲ್ಲಿ ಎನ್ಐಎ ಬಹುಮಾನವನ್ನು ಘೋಷಿಸಿದೆ.
ರಿಂಡಾ ಮೂಲತಃ ತರನ್ ತಾರನ್‌ನ ರಟ್ಟೋಕೆ ಗ್ರಾಮಕ್ಕೆ ಸೇರಿದವನಾದರೂ, ಈತನ ಶಾಶ್ವತ ವಿಳಾಸವು ಮಹಾರಾಷ್ಟ್ರದ ನಾಂದೇಡ್‌ನಲ್ಲಿದೆ. ಈತನ ಗ್ಯಾಂಗ್ ಇನ್ನೂ ನಾಂದೇಡ್‌ನಲ್ಲಿ ಸಕ್ರಿಯವಾಗಿದೆ ಮತ್ತು ಮೇ ತಿಂಗಳಲ್ಲಿ ಇವರ ತಂಡದ ಇಬ್ಬರು ಸದಸ್ಯರು ಗುಪ್ತಚರ ಪ್ರಧಾನ ಕಚೇರಿಯ ಮೇಲೆ ಆರ್‌ಪಿಜಿ ಎಸೆದಿದ್ದರು ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.
ರಿಂಡಾ ವಿರುದ್ಧ ಎನ್‌ಐಎ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ತಲೆಮರೆಸಿಕೊಂಡಿರುವ ಆರೋಪಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ ಈ ಬಹುಮಾನ ನೀಡಲಾಗುವುದು. ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಚಂಡೀಗಢದಲ್ಲಿರುವ ಎನ್‌ಐಎ ವಲಯ ಕಚೇರಿಯಿಂದ ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಐಇಡಿಗಳನ್ನು ರಿಂಡಾನೇ ಗಡಿಯಾಚೆಯಿಂದ ಭಾರತದೊಳಕ್ಕೆ ಕಳುಹಿಸಿದ್ದ ಎಂಬುದು ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ.