ಹೈದರಾಬಾದ್(ತೆಲಂಗಾಣ): ಮುತ್ತಿನ ನಗರಿಯಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ನಿಲೋಫರ್ ಆಸ್ಪತ್ರೆಯ ಆವರಣದಲ್ಲಿ 10 ದಿನದ ನವಜಾತ ವಿಕಲಚೇತನ ಶಿಶುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಬಿಟ್ಟುಹೋಗಿರುವ ಘಟನೆ ನಡೆದಿದೆ. ಈ ನವಜಾತ ಶಿಶುವನ್ನ ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು, ಶಿಶುವು ಜಾಂಡೀಸ್‌ನಿಂದ ಬಳಲುತ್ತಿದೆ ಎಂದು ತಿಳಿಸಿದ್ದಾರೆ.
ಶಿಶು ದೈಹಿಕವಾಗಿ ಅಶಕ್ತವಾಗಿರುವುದರಿಂದ ಪೋಷಕರು ಬಿಟ್ಟುಹೋಗಿದ್ದಾರೆ ಎಂದು ವೈದ್ಯರು ಶಂಕಿಸಿದ್ದಾರೆ. ವೈದ್ಯರು ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದಾರೆ. ಈ ಕುರಿತು ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆಯಲ್ಲಿ ಮಗುವನ್ನು ಬಿಟ್ಟು ಹೋದವರನ್ನು ಶೀಘ್ರದಲ್ಲೇ ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.