ಕೊಲ್ಲಾಪುರ: ಯಾವುದಾದರು ಕಾಮಗಾರಿಗೆ ಅಥವಾ ಗಣಿಗಾರಿಕೆಗಾಗಿ ಭೂಮಿ ಅಗೆಯುವಾಗ ನಾಣ್ಯ, ಪಾತ್ರೆ, ಚಿನ್ನ ಸೇರಿದಂತೆ ಪುರಾತನ ವಸ್ತುಗಳು ಪತ್ತೆಯಾಗುವುದು ಸಾಮಾನ್ಯ. ಆದರೆ, ಜಿಲ್ಲೆಯ ಕರ್ವೀರ್ ತಾಲೂಕಿನ ವಾಕರೆ ಗ್ರಾಮದಲ್ಲಿ ಭೂಮಿ ಅಗೆಯುವಾಗ ಸುಮಾರು 1 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹಬ್ಬಿರುವ ಕೆರೆಯೊಂದು ಪತ್ತೆಯಾಗಿದೆ.
ಸೌರ ವಿದ್ಯುತ್ ಯೋಜನೆಗಾಗಿ ವಾಕರೆ ಗ್ರಾಮದಲ್ಲಿ ಭೂಮಿ ಅಗೆಯುವಾಗ ಈ ವಿಶಾಲವಾದ ಕೆರೆ ಪತ್ತೆಯಾಗಿದೆ. ಇದು ಎಷ್ಟು ವರ್ಷ ಹಿಂದಿನ ಕೆರೆಯಾಗಿರಬಹುದು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಕೆರೆಯಲ್ಲಿ ಮಣ್ಣು ತೆಗೆಯುತ್ತಿದ್ದಂತೆ ಕೆಲವೊಂದು ಹಳೆಯ ಕಾಲದ ವಸ್ತಗಳು ಕೂಡ ಕಂಡು ಬಂದಿವೆ. ಇದನ್ನು ನೋಡಿದ ಅಧಿಕಾರಿಗಳು ಮತ್ತು ಸ್ಥಳೀಯರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ನಮ್ಮ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಕೆರೆ ಇಲ್ಲಿತ್ತಾ ಎಂದು ಜನ ಆಶ್ಚರ್ಯಚಕಿತರಾಗಿದ್ದಾರೆ.
12ನೇ ಶತಮಾನದ ಕೆರೆ: ಕೆರೆ ಪತ್ತೆಯಾಗಿರುವ ಕರ್ವೀರ್ ತಾಲೂಕಿನ ವಾಕರೆ ಗ್ರಾಮ ಕೊಲ್ಲಾಪುರ ನಗರದಿಂದ ಕೇವಲ 14 ಕಿ.ಮೀ. ದೂರದಲ್ಲಿದೆ. ಸಂಸದ ಸಂಜಯ್ ಮಂಡ್ಲಿಕ್ ಅವರ ನಿಧಿಯಿಂದ ಇಲ್ಲಿ ಸೌರ ವಿದ್ಯುತ್ ಸ್ಥಾವರ ನಿಮಾರ್ಣ ಮಾಡಲಾಗ್ತಿದೆ. ಗ್ರಾಮದ ಜೌಗು ಪ್ರದೇಶದಲ್ಲಿ ಈ ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲಾಗ್ತಿದೆ. ಅದಕ್ಕಾಗಿ ಭೂಮಿ ಅಗೆಯುವ ಕಾರ್ಯ ನಡೆಯುತ್ತಿತ್ತು. ಆರಂಭದಲ್ಲಿ ಭೂಮಿ ಅಗೆಯುವಾಗ ಕೆಲವೊಂದು ಕೆಂಪು ಕಲ್ಲುಗಳು ಕಂಡು ಬಂದಿದ್ದವು. ಈ ವೇಳೆ ಇಲ್ಲಿ ಏನೋ ವಿಶೇಷತೆ ಇದೆ ಎಂದು ಅರಿವಾಗಿತ್ತು. ಆದರೆ, ಕೆಸರಿನಿಂದ ತುಂಬಿದ್ದ ಪ್ರದೇಶವಾಗಿದ್ದರಿಂದ ಕಾಮಗಾರಿಗೆ ಸ್ವಲ್ಪ ಅಡಚಣೆಯಾಗಿತ್ತು. ಇದೀಗ ಕೆಸರು ಮಣ್ಣು ತೆಗೆಯುತ್ತಿದ್ದಂತೆ ಬೃಹತ್ ಕೆರೆ ಪತ್ತೆಯಾಗಿದೆ. ಈ ಕೆರೆ 12ನೇ ಶತಮಾನದಲ್ಲಿ ನಿರ್ಮಾಣವಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
20 ಸಾವಿರ ಟ್ರಾಲಿ ಕೆಸರು ಮಣ್ಣು ತೆರವು:
ಮಣ್ಣು ಅಗೆಯಲು ಪ್ರಾರಂಭಿಸಿದ ಬಳಿಕ ಈ ಪ್ರದೇಶವು ಪ್ರಾಚೀನ ಇತಿಹಾಸ ಹೊಂದಿದೆ ಎಂಬುದು ಸ್ಪಷ್ಟವಾಗಿತ್ತು. ಹಾಗಾಗಿ ಜೆಸಿಬಿ ಸಹಾಯದಿಂದ ಮಣ್ಣು ಅಗೆಯಬೇಡಿ ಎಂದು ಪುರಾತತ್ವ ಇಲಾಖೆ ಸೂಚನೆ ನೀಡಿತ್ತು. ಇದುವರೆಗೆ ಸುಮಾರು 18,000ರಿಂದ 20,000 ಟ್ರಾಲಿಗಳಷ್ಟು ಕೆಸರು ಇಲ್ಲಿಂದ ತೆಗೆಯಲಾಗಿದೆ. ಸದ್ಯ ಶೇ. 25ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಇನ್ನೂ ಶೇ. 75ರಷ್ಟು ಕೆಲಸ ಬಾಕಿಯಿದೆ ಎಂದು ಗ್ರಾಮದ ಸರ್ಪಂಚ್ ವಸಂತ್ ಟೋಡ್ಕರ್ ಹೇಳಿದ್ದಾರೆ. ಗ್ರಾಮಸ್ಥರ ಪ್ರಕಾರ, ಈ ಕೆರೆಯಲ್ಲಿ ದೇವಾಲಯ ಇರುವ ಸಾಧ್ಯತೆಯಿದೆ.
ಪ್ರಸಿದ್ಧ ಕೆರೆ ದೇವಾಲಯಗಳಲ್ಲಿ ಒಂದಾಗುವ ಸಾಧ್ಯತೆ:
ಕೆಲ ದಿನಗಳ ಹಿಂದೆ ಕೊಲ್ಲಾಪುರದ ಅಂಬಾಬಾಯಿ ದೇವಾಲಯದ ಸಮೀಪದ ಮಣಿಕರ್ನಿಕಾ ಕುಂಡ್ನಲ್ಲಿ ಮಣ್ಣು ತೆಗೆಯುತ್ತಿದ್ದಾಗ ಕೆರೆಯೊಂದು ಪತ್ತೆಯಾಗಿತ್ತು ಮತ್ತು ಅದರಲ್ಲಿ ದೇವಾಲಯವೊಂದು ಕಂಡು ಬಂದಿತ್ತು. ಜಿಲ್ಲೆಯ ಪ್ರಮುಖ ದೇವಾಲಯಗಳಾದ ಜ್ಯೋತಿಬಾದ ಯಮೈ ಸರೋವರ ಮತ್ತು ಕೋಟಿತಿರ್ಥ್ ಸರೋವರವನ್ನು ಇದೇ ರೀತಿ ನಿರ್ಮಿಸಲಾಗಿದೆ. ಸದ್ಯ, ವಾಕರೆ ಗ್ರಾಮದಲ್ಲಿ ಕಂಡು ಬಂದಿರುವ ಕೆರೆ ಭೋಜ ರಾಜರ ಆಡಳಿತದಲ್ಲಿ ನಿರ್ಮಾಣವಾಗಿರಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಕೆರೆಯ ಸುತ್ತ ಕೆಂಪು ಕಲ್ಲುಗಳು ಕಂಡು ಬಂದಿರುವುದರಿಂದ ಸ್ಪಷ್ಟವಾಗಿ ಯಾವ ಕಾಲದಲ್ಲಿ ನಿರ್ಮಾಣವಾದದ್ದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಉತ್ಖನನದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.