ವಿಜಯಪುರ: ಸಿಂದಗಿ ಮತಕ್ಷೇತ್ರ ಎರಡೇ ವರ್ಷದಲ್ಲಿ ಮತ್ತೊಂದು ಚುನಾವಣೆಗೆ ಸಜ್ಜಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ನಿಂದ ಗೆದ್ದು ತೋಟಗಾರಿಕೆ ಸಚಿವರಾಗಿದ್ದ ಎಂ.ಸಿ.ಮನಗೂಳಿ ಅವರು 2021 ರಲ್ಲಿ ಕೋವಿಡ್ನಿಂದ ನಿಧನರಾಗಿದ್ದರು. ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿಯನ್ನು ಕಾಂಗ್ರೆಸ್ ಸೆಳೆದು ಉಪಚುನಾವಣಾ ಕಣಕ್ಕಿಳಿಸಿತ್ತು. ಅನುಕಂಪ ವರ್ಕೌಟ್ ಆಗದೇ ಇಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅಶೋಕ್ ಮನಗೂಳಿ ಅವರ ವಿರುದ್ಧ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ತಂತ್ರ ಹೂಡಿ ರಮೇಶ್ ಭೂಸನೂರ್ ಅವರನ್ನು ಗೆಲ್ಲಿಸಿದ್ದರು. ಈಗ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಮತ್ತೊಮ್ಮೆ ಸಿಂದಗಿ ಕ್ಷೇತ್ರ ಮತ ರಾಜಕೀಯಕ್ಕೆ ಸಿದ್ದವಾಗಿದೆ.
ಹಾಲಿ ಶಾಸಕ ಭೂಸನೂರ್ ಉತ್ತಮ ಜನಸಂಪರ್ಕ ಹೊಂದಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ಕೂಡ ಕ್ಷೇತ್ರದಲ್ಲಿ ನಿರಂತರ ಓಡಾಟ ಮಾಡುತ್ತಾ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೂಡ ಕ್ಷೇತ್ರದಲ್ಲಿ ಓಡಾಟ ಹೆಚ್ಚಿಸಿದ್ದಾರೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಿದೆ.
2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಸಿ. ಮನಗೂಳಿ ಜಯಗಳಿಸಿದ್ದರು. ಕೋವಿಡ್ ವೇಳೆ ಅವರು ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಬಳಿಕ 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಎಂಸಿ ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದರು. ಆದರೆ, ಅನುಕಂಪದ ಅಲೆ ಏಳದೇ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ಅವರು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರು.
ಭೂಸನೂರ್ಗೆ ಟಿಕೆಟ್ ಘೋಷಣೆ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ರಮೇಶ್ ಭೂಸನೂರ್ಗೆ ಟಿಕೆಟ್ ಘೋಷಿಸಿದೆ. ಭೂಸನೂರ್ ಈಗಾಗಲೇ ಕ್ಷೇತ್ರದಲ್ಲಿ ಮತಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ಇನ್ನೂ ಈ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಪಕ್ಷದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. 10 ಜನ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಅಶೋಕ್ ಮನಗೂಳಿ, ರಾಕೇಶ್ ಕಲ್ಲೂರ್, ವಿಠ್ಠಲ್ ಕೋಳೂರ್ ಹಾಗೂ ಚನ್ನಬಸಪ್ಪ ವಾರದ್ ಕೂಡಾ ಸೇರಿದ್ದಾರೆ.
ಜೆಡಿಎಸ್ಗೆ ಸಿಗುತ್ತಾ ಅನುಕಂಪ: ಶಿವಾನಂದ ಪಾಟೀಲ್ ಸೋಮಜಾಳ ಅವರನ್ನು ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಆದರೆ, ಪಂಚರತ್ನ ಯೋಜನೆ ಕಾರ್ಯಕ್ರಮದ ಮುಗಿಸಿದ ಬಳಿಕ ಶಿವಾನಂದ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಇದು ಜೆಡಿಎಸ್ಗೆ ದೊಡ್ಡ ಹೊಡೆತ ನೀಡಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಶಿವಾನಂದ ಪಾಟೀಲ್ ಅವರ ಪತ್ನಿ ವಿಶಾಲಾಕ್ಷಿ ಅವರಿಗೆ ಟಿಕೆಟ್ ನೀಡಿದ್ದಾರೆ. ವಿಶಾಲಾಕ್ಷಿ ಅವರಿಗೆ ಅನುಕಂಪದ ಅಲೆ ಸಿಗುತ್ತಾ ಎಂಬುದು ಪ್ರಶ್ನೆಯಾಗಿದೆ.
ಕ್ಷೇತ್ರದ ಮತದಾರರ ಮಾಹಿತಿ: ಸಿಂದಗಿ ಕ್ಷೇತ್ರದಲ್ಲಿ ಒಟ್ಟು 2,31,766 ಮತದಾರರು ಇದ್ದಾರೆ. ಇದರಲ್ಲಿ 1,19,950 ಪುರುಷರಿದ್ದರೆ, 1,11,789 ಮಂದಿ ಮಹಿಳೆಯರು, ಇತರೆ 27 ಮತದಾರರು ಇದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ ಈವರೆಗೂ 5 ಬಾರಿ ಗೆದ್ದಿದೆ. ಇದರಲ್ಲಿ ರಮೇಶ್ ಭೂಸನೂರ್ ಅವರು 3 ಬಾರಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಕಾಂಗ್ರೆಸ್ ಕೂಡ 5 ಬಾರಿ ಗೆಲುವು ಸಾಧಿಸಿದೆ. 2 ಬಾರಿ ಜೆಡಿಎಸ್, 1 ಬಾರಿ ಎನ್ಸಿಒ ಅಭ್ಯರ್ಥಿ ಗೆಲುವು ಪಡೆದಿದ್ದಾರೆ.
2021 ರ ಉಪಚುನಾವಣೆಯಲ್ಲಿ ಬಿಜೆಪಿಯ ರಮೇಶ್ ಭೂಸನೂರ್ ಅವರು 93,865 ಮತಗಳನ್ನು ಪಡೆದರೆ, ಕಾಂಗ್ರೆಸ್ನ ಅಶೋಕ್ ಮನಗೂಳಿ 62,680 ಮತ ಪಡೆದಿದ್ದರು. ಜೆಡಿಎಸ್ನ ನಾಜಿಯಾ ಅಂಗಡಿ ಕೇವಲ 4,353 ಮತ ಗಳಿಸಿದ್ದರು. ಇದರಿಂದ ರಮೇಶ್ ಭೂಸನೂರ್ ಅವರು 31,185 ಮತಗಳ ಅಂತರದಿಂದ ಆಯ್ಕೆಯಾಗಿದ್ದರು.
ಓದಿ: ಅಚ್ಚರಿಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ: ಟಿಕೆಟ್ ಘೋಷಿಸದ 35 ಕ್ಷೇತ್ರದ ಬಗ್ಗೆ ಹೆಚ್ಚಿದ ಕುತೂಹಲ