ವಿಜಯಪುರ: ಜಿಲ್ಲೆಯ ಏಕೈಕ ಮೀಸಲು ಮತಕ್ಷೇತ್ರ ನಾಗಠಾಣ. ಈ ಬಾರಿಯ ಚುನಾವಣಾ ವಿಚಾರವಾಗಿ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. 2018ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಜೆಡಿಎಸ್ನ ದೇವಾನಂದ ಫುಲಸಿಂಗ್ ಚವ್ಹಾಣ್ ಶಾಸಕರಾಗಿ ಆಯ್ಕೆಯಾಗಿದ್ದು, ಈ ಬಾರಿಯೂ ಅವರೇ ಅಭ್ಯರ್ಥಿಯಾಗಿದ್ದಾರೆ. ಆದರೆ, ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹಿಡಿತ ಸಾಧಿಸುವ ಗುರಿಗಾಗಿ ಹಾತೊರೆಯುಯತ್ತಿರುವುದರಿಂದ ಹಾಲಿ ಶಾಸಕ ದೇವಾನಂದ ಚವ್ಹಾಣ ಅವರಿಗೆ ಗೆಲುವು ಅಷ್ಟೊಂದು ಸುಲಭವಲ್ಲ ಎನ್ನುತ್ತಿದ್ದಾರೆ ರಾಜಕೀಯ ಚಿಂತಕರು.
ಇಲ್ಲಿ ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಸೊತರೂ ನಿರಂತರವಾಗಿ ಮತಕ್ಷೇತ್ರದ ಜನತೆಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿನ ರಾಜಕಾರಣದ ಒಮ್ಮೆ ಮೇಲುಗೈ ಮತ್ತೊಮ್ಮೆ ದ್ವೇಷ ರಾಜಕಾರಣ ಸಹ ನಡೆಯುತ್ತಲೇ ಇರುತ್ತದೆ. ಪ್ರತಿ ಭಾರಿ ಶಾಸಕರ ಬದಲಾವಣೆ ಬಯಸುವ ಜನರು ಕ್ಷೇತ್ರದಲ್ಲಿದ್ದಾರೆ. ಇದರ ಜತೆ ಸಂಸದ ರಮೇಶ ಜಿಗಜಿಣಗಿ ಕೂಡಾ ಬಿಜೆಪಿಯಿಂದ ಅಖಾಡಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಶಾಸಕ ದೇವಾನಂದ ಚವ್ಹಾಣಗೆ ಈ ಬಾರಿ ಗೆಲುವು ಸುಲಭವಲ್ಲ ಎನ್ನುವದು ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.
ನಾಗಠಾಣ ಮತಕ್ಷೇತ್ರ ಇದೊಂದು ಎಸ್ಸಿ ಮೀಸಲು ಮತಕ್ಷೇತ್ರವಾಗಿದೆ. ಈ ಮತ ಕ್ಷೇತ್ರದಲ್ಲಿ ಘಟಾನುಘಟಿಗಳು ಈ ಬಾರಿ ಚುನಾವಣೆಗೆ ನಿಲ್ಲಲು ಸಜ್ಜಾಗಿದ್ದಾರೆ. ಹಾಲಿ ಶಾಸಕರಾದ ಜೆಡಿಎಸ್ ಪಕ್ಷದ ದೇವಾನಂದ ಚವ್ಹಾಣ ಸರಳ ಹಾಗೂ ಸಜ್ಜನಿಕೆಯ ರಾಜಕಾರಣಿಯಾಗಿದ್ದರೂ, ಈ ಬಾರಿ ಮತಕ್ಷೇತ್ರದಲ್ಲಿ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಇನ್ನು ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರ ಸುಪುತ್ರ ಗೋಪಾಲ ಕಾರಜೋಳ ಪ್ರಬಲ ಆಕಾಂಕ್ಷಿಯಾಗಿದ್ದಾರೆ. 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಗೋಪಾಲ ಕಾರಜೊಳ, ಕೆಲವೇ ಸಾವಿರ ಮತಗಳಿಂದ ಜೆಡಿಎಸ್ ಅಭ್ಯರ್ಥಿಯ ವಿರುದ್ಧ ಪರಾಭವಗೊಂಡಿದ್ದರು. ಹೀಗಾಗಿ, ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.
ಇವರ ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹೇಂದ್ರ ನಾಯಕ ಕೂಡ ಬಿಜೆಪಿ ಪಕ್ಷದ ನಾಗಠಾಣ ಮೀಸಲು ಮತಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೊತೆಗೆ ಮಾಜಿ ಕೇಂದ್ರ ಸಚಿವರು ಹಾಗೂ ಹಾಲಿ ಸಂಸದ ರಮೇಶ ಜಿಗಜಿಣಗಿ ಕೂಡಾ ನಾಗಠಾಣ ಮೀಸಲು ಮತಕ್ಷೇತ್ರದತ್ತ ಒಲವು ತೋರುತ್ತಿದ್ದು, ಹೈಕಮಾಂಡ್ ಬಯಸಿದರೆ ತಾವು ರಾಜ್ಯ ರಾಜಕಾರಣಕ್ಕೆ ಬರಲು ಸಿದ್ದ ಎನ್ನುತ್ತಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್ ಇಲ್ಲಿ ಕಗ್ಗಂಟಾಗಿದೆ. ಟಿಕೆಟ್ ಘೋಷಣೆಯಿದ ಸದ್ಯದಲ್ಲೇ ಈ ಗೊಂದಲಕ್ಕೆ ತೆರೆ ಬೀಳಲಿದೆ.
ಇತ್ತ ಜೆಡಿಎಸ್ನಿಂದ ಹಾಲಿ ಶಾಸಕ ದೇವಾನಂದ ಚವ್ಹಾಣ ಸ್ಪರ್ಧಾ ಕಣಕ್ಕೆ ಇಳಿದಿದ್ದು, ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಟಿಕೆಟ್ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಪಕ್ಷದಿಂದ ಬರೋಬ್ಬರಿ 10ಕ್ಕಿಂತ ಹೆಚ್ಚು ಜನ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಾಜಿ ಶಾಸಕರಾದ ರಾಜು ಆಲಗೂರ, ವಿಠಲ ಕಟಕದೊಂಡ, ಯುವ ನಾಯಕರಾದ ಶ್ರೀನಾಥ್ ಪೂಜಾರಿ ಜೊತೆಗೆ ಮಹಿಳಾ ಮಣಿಗಳಾದ ಕಾಂತಾ ನಾಯಕ, ಶ್ರೀದೇವಿ ಉತ್ಲಾಸ್ಕರ್ ಕೂಡಾ ಟಿಕೆಟ್ ಬೇಡಿಕೆ ಇಟ್ಟು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೊನೆಗೆ ವಿಠ್ಠಲ ಕಟಕದೊಂಡ ಅವರಿಗೆ ಟಿಕೆಟ್ ಫೈನಲ್ ಆಗಿದ್ದು ಘೋಷಣೆ ಸಹ ಮಾಡಲಾಗಿದೆ.
ಮತದಾರರ ಮಾಹಿತಿ: ಕ್ಷೇತ್ರದಲ್ಲಿ ಒಟ್ಟು 2,63,945 ಮತದಾರರ ಸಂಖ್ಯೆ ಇದೆ. ಅದರಲ್ಲಿ ಪುರುಷ ಮತದಾರರು 1,35,836, ಮಹಿಳಾ ಮತದಾರರು 1,28,082 ಹಾಗೂ ಇತರ 27 ಮತದಾರರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯ ಈ ಕ್ಷೇತ್ರದ ನಿರ್ಣಾಯಕವಾಗಿದೆ.
ಕ್ಷೇತ್ರದ ವೈಶಿಷ್ಟ್ಯ: ಮುಂಬೈ ಕರ್ನಾಟಕ ಪ್ರದೇಶದದಲ್ಲಿ ಬರುವ ಈ ಕ್ಷೇತ್ರವು ವಿಜಯಪುರ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. 2008ರ ಕ್ಷೇತ್ರ ವಿಂಗಡಣೆ ಪ್ರಕಾರ, ಇದು ವಿಜಯಪುರ ತಾಲೂಕು, ಇಂಡಿ ತಾಲೂಕು, ನಾಗಠಾಣ, ಚಡಚಣ ಸೇರಿದಂತೆ ಹಲವು ವಾರ್ಡ್ಗಳನ್ನು ಒಳಗೊಂಡಿದೆ.
ರಾಜಕೀಯ ಪಕ್ಷಗಳ ಬಲಾಬಲ: 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ 67.62 ದಾಖಲೆಯ ಮತ ಚಲಾವಣೆಯಾಗಿದ್ದವು. ಇದೇ ಚುನಾವಣೆಯಲ್ಲಿ 1578 ನೋಟಾ ಮತಗಳು ಸಹ ಚಲಾವಣೆಗೊಂಡಿದ್ದವು. ಕ್ಷೇತ್ರವು ಒಟ್ಟು 2,60,452 ಮತದಾರರನ್ನು ಹೊಂದಿತ್ತು. ಒಟ್ಟು ಮಾನ್ಯ ಮತಗಳ ಸಂಖ್ಯೆ 1,74,030. ಜೆಡಿಎಸ್ ಅಭ್ಯರ್ಥಿ ದೇವಾನಂದ್ ಫುಲಾಸಿಂಗ್ ಚವ್ಹಾಣ್ ಶೇ 3.22 ಮತಗಳ ಅಂತರದಿಂದ ಗೆದ್ದು ಶಾಸಕರಾದರು. ಅವರು ಒಟ್ಟು 59,709 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ವಿಠಲ್ ದೊಂಡಿಬಾ 54,108 ಮತ ಪಡೆದು ಸೋತರು.
2013ರ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರವು ಒಟ್ಟು 2,25,647 ಮತದಾರರನ್ನು ಹೊಂದಿತ್ತು. ಒಟ್ಟು ಮಾನ್ಯ ಮತಗಳ ಸಂಖ್ಯೆ 1,40,024 ಆಗಿತ್ತು. ಕಾಂಗ್ರೆಸ್ ಅಭ್ಯರ್ಥಿ ರಾಜು ಅಲಗೂರ್ 0.48% ಮತಗಳ ಕಡಿಮೆ ಅಂತರದಿಂದ ಗೆಲುವು ಸಾಧಿಸಿ ಶಾಸಕರೂ ಆಗಿದ್ದರು. ಈ ಚುನಾವಣೆಯಲ್ಲಿ ಒಟ್ಟು 45,570 ಮತಗಳನ್ನು ಪಡೆದಿದ್ದ ಕೈ ಅಭ್ಯರ್ಥಿ ರಾಜು, ಜೆಡಿಎಸ್ನ ಪ್ರತಿಸ್ಪರ್ಧಿ ದೇವಾನಂದ್ ಫುಲಾಸಿಂಗ್ ಚವ್ಹಾಣ್ ಅವರನ್ನು ಸೋಲುಸಿದ್ದರು. ದೇವಾನಂದ್ ಒಟ್ಟು 44,903 ಮತ ಗಳಿಸಿದ್ದರು.
2008 ರಲ್ಲಿ ಕ್ಷೇತ್ರವು ಒಟ್ಟು 1,92,368 ಮತದಾರರನ್ನು ಹೊಂದಿತ್ತು. ಒಟ್ಟು ಮಾನ್ಯ ಮತಗಳ ಸಂಖ್ಯೆ 1,06,805. ಬಿಜೆಪಿ ಅಭ್ಯರ್ಥಿ ವಿಠಲ್ ದೊಂಡಿಬಾ ಅವರು 3.94% ಮತಗಳ ಅಂತರದಿಂದ ಗೆದ್ದು ಈ ಕ್ಷೇತ್ರದಿಂದ ಶಾಸಕರಾಗಿದ್ದರು. ಕಾಂಗ್ರೆಸ್ನ ಪ್ರತಿ ಸ್ಪರ್ಧಿಯಾಗಿದ್ದ ರಾಜು ಅಲಗೂರ್ ಎರಡನೇ ಸ್ಥಾನಕ್ಕೆ ಕುಸಿದಿದ್ದರು. ವಿಠಲ್ ದೊಂಡಿಬಾ ಒಟ್ಟು 40,225 ಮತ ಪಡೆದಿದ್ದರೆ, ರಾಜು ಅಲಗೂರ್ 36,018 ಮತ ಪಡೆದಿದ್ದರು. 2008 ರಿಂದ ಈವರೆಗೂ ಈ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆಯಿದೆ. 2013ರಲ್ಲಿ ಕೆಜೆಪಿ ಪಕ್ಷದ ಹುಟ್ಟಿನಿಂದ ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿತ್ತು ಅನ್ನೋದು ಕೂಡ ಇಲ್ಲಿ ಗಮನಿಸಬೇಕಾದ ಅಂಶ.
ಮತಕ್ಷೇತ್ರದಲ್ಲಿ ಚಿತ್ರಣವೇ ಬೇರೆಯಾಗಿದ್ದರಿಂದ ಹಾಲಿ ಶಾಸಕ ದೇವಾನಂದ ಚವ್ಹಾಣ ಮರು ಆಯ್ಕೆ ಅಷ್ಟು ಸುಲಭವಲ್ಲ. ಸರಳ ಸಜ್ಜನಿಕೆಯ ರಾಜಕಾರಣಿ, ಎಲ್ಲರೊಂದಿಗೆ ಬೆರೆಯುವ ಸಿಂಪಲ್ ಶಾಸಕ ಎಂಬ ಮಾತುಗಳಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಒಂದಿಷ್ಟು ಅಪಸ್ವರಗಳು ಕೇಳಿ ಬರುತ್ತಿವೆ. ಇನ್ನು 2018ರ ಚುನಾವಣೆಯಲ್ಲಿ ಸೋತ ಬಳಿಕವೂ ಬಿಜೆಪಿ ಅಭ್ಯರ್ಥಿಯಾದ ಗೋಪಾಲ ಕಾರಜೋಳ ಅವರ ಸಹೋದರ ಉಮೇಶ ಕಾರಜೋಳ ಮತಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಈ ಬಾರಿ ಜನರ ಒಲವು ಒಂದಿಷ್ಟು ಬಿಜೆಪಿ ಪರವಾಗಬಹುದು. ಕಾಂಗ್ರೆಸ್ ಸ್ವಲ್ಪ ಬೆವರು ಹರಿಸಿದರೆ ಕ್ಷೇತ್ರ ಕೈ ಪಾಲಾಗಲೂಬಹುದು ಎನ್ನುತ್ತಾರೆ ರಾಜಕೀಯ ಪಂಡಿತರು.
ಇದನ್ನೂ ಓದಿ: ಬೈಲಹೊಂಗಲ ಮತಕ್ಷೇತ್ರದಲ್ಲಿ ಕೈ ಸ್ಥಿರ, ಕಮಲ ತಳಮಳ; ಅವಕಾಶಕ್ಕಾಗಿ ಜೆಡಿಎಸ್ ಹೋರಾಟ