ಬೆಂಗಳೂರು: ರಾಜ್ಯದಲ್ಲಿ 1989ರ ನಂತರ ನಡೆದ ಎಲ್ಲ ವಿಧಾನಸಭೆ ಚುನಾವಣೆಗಳಲ್ಲಿಯೂ ಆಡಳಿತ ಪಕ್ಷಕ್ಕೆ ಸೋಲಾಗಿದೆ. ಅಧಿಕಾರದಲ್ಲಿದ್ದ ಪಕ್ಷಕ್ಕೆ ಸತತವಾಗಿ ಎರಡನೇ ಬಾರಿಗೆ ಗದ್ದುಗೆ ಏರುವ ಅವಕಾಶ ಸಿಕ್ಕಿಲ್ಲ. ಮೊದಲ ಆರು ಚುನಾವಣೆಗಳನ್ನು ಕಾಂಗ್ರೆಸ್, ನಂತರದ ಎರಡು ಚುನಾವಣೆಗಳನ್ನು ಜನತಾ ಪಕ್ಷ ಗೆದ್ದಿದ್ದು ಬಿಟ್ಟರೆ ಈವರೆಗೂ ಸತತವಾಗಿ ಎರಡು ಬಾರಿ ಯಾವುದೇ ಪಕ್ಷವೂ ರಾಜ್ಯದಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿಲ್ಲ. ಈ ಬಾರಿ ಬಿಜೆಪಿ ಈ ಪರಂಪರೆಯನ್ನು ಮುರಿದು ಎರಡನೇ ಬಾರಿ ಅಧಿಕಾರಕ್ಕೆ ಬರಲು ರಣತಂತ್ರಗಳನ್ನು ಹೆಣೆದಿದೆ. ಒಂದು ವೇಳೆ ಇದರಲ್ಲಿ ಬಿಜೆಪಿ ಸಫಲವಾದಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ.
ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಕ್ಕೆ ಮರು ಚುನಾವಣೆಯಲ್ಲಿ ಗೆದ್ದು ಬರುವ ಅವಕಾಶ ತಪ್ಪಿ ಮೂರೂವರೆ ದಶಕವಾಗಿದೆ. ಒಂದೊಂದು ಬಾರಿ ಒಂದೊಂದು ಪಕ್ಷಕ್ಕೆ ಮತದಾರರ ಮಣೆ ಹಾಕುತ್ತಾ ಬಂದಿರುವುದು ವಿಶೇಷ. ಒಂದರಿಂದ ಆರನೇ ವಿಧಾನಸಭೆವರೆಗೂ ಸತತವಾಗಿ ಕಾಂಗ್ರೆಸ್ ಗೆಲ್ಲುತ್ತಾ ಬಂದಿತ್ತು. ಮೊದಲ ಬಾರಿಗೆ 7ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು, ಜನತಾ ಪಕ್ಷ ಸರ್ಕಾರ ರಚಿಸಿತ್ತು. 8ನೇ ವಿಧಾನಸಭಾ ಚುನಾವಣೆಯಲ್ಲಿಯೂ ಜನತಾ ಪಕ್ಷವೇ ಮರಳಿ ಗದ್ದುಗೆ ಹಿಡಿದಿತ್ತು. ಆದರೆ 9ನೇ ಚುನಾವಣೆಯಲ್ಲಿ ಮರಳಿ ಕಾಂಗ್ರೆಸ್ ಅಧಿಕಾರಕ್ಕೇರಿತು. 10ನೇ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಜನತಾ ದಳ ಅಧಿಕಾರಕ್ಕೆ ಬಂದಿತು. 11ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, 12ನೇ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್ ಜೆಡಿಎಸ್ ಮತ್ತು ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಯಿತು. 13ನೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ರಾಜ್ಯದಲ್ಲಿ ಗದ್ದುಗೆ ಏರಿತು. 14ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಮರಳಿತು. 15ನೇ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು ಬಳಿಕ ಅದು ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗಿದೆ.
ನಾಲ್ಕು ದಶಕದ ರಾಜಕೀಯ ಹಿನ್ನೋಟ: ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗಿದ್ದು 1983 ರಲ್ಲಿ. ಜನತಾ ಪರಿವಾರದ ನಾಯಕ ರಾಮಕೃಷ್ಣ ಹೆಗಡೆ 1983 ರ ಜನವರಿ 10 ರಂದು ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯೂ ಆಗಿದ್ದರು. ದೂರವಾಣಿ ಕದ್ದಾಲಿಕೆ ಆರೋಪದ ಮೇಲೆ ರಾಜೀನಾಮೆ ನೀಡಿ ಮರು ಚುನಾವಣೆಗೆ ಹೋಗಿದ್ದರು. 1985 ರ ಮಾರ್ಚ್ 8 ರಂದು 8ನೇ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಜನಾದೇಶ ಪಡೆದು ಸರ್ಕಾರ ರಚನೆ ಮಾಡಿದರು. ಆದರೆ ಬಳಿಕ ಅವರ ರಾಜೀನಾಮೆಯಿಂದ ಅವರದ್ದೇ ಪಕ್ಷದ ಎಸ್.ಆರ್.ಬೊಮ್ಮಾಯಿ 1988ರ ಆಗಸ್ಟ್ 13 ರಿಂದ 1989ರ ಏಪ್ರಿಲ್ 21 ರವರೆಗೂ ಮುಖ್ಯಮಂತ್ರಿಯಾದರು. ನಂತರ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿ ಹೊಸದಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ವೀರೇಂದ್ರ ಪಾಟೀಲ್, 1989ರ ನವೆಂಬರ್ 30 ರಂದು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದರು. ಒಂದೇ ವರ್ಷದಲ್ಲಿ ಅವರನ್ನು ಇಳಿಸಿ 1990ರ ಅಕ್ಟೋಬರ್ 17 ರಂದು ಬಂಗಾರಪ್ಪರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ ಅವರನ್ನೂ ಎರಡು ವರ್ಷದಲ್ಲೇ ಕೆಳಗಿಳಿಸಿ 1992 ರ ನವೆಂಬರ್ 19 ರಂದು ವೀರಪ್ಪ ಮೊಯ್ಲಿ ಅವರನ್ನು ಸಿಎಂ ಮಾಡಲಾಯಿತು.
ನಂತರ ನಡೆದ ಚುನಾವಣೆಯಲ್ಲಿ (10ನೇ) ಕಾಂಗ್ರೆಸ್ ಸೋತು ಜನತಾದಳ ಅಧಿಕಾರಕ್ಕೆ ಬಂದಿತು. 1994 ರ ಡಿಸೆಂಬರ್ 11 ರಂದು ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ದೇವೇಗೌಡರು ಪ್ರಧಾನಿಯಾದ ಹಿನ್ನೆಲೆಯಲ್ಲಿ 1996 ರ ಮೇ 31 ರಂದು ಜೆ.ಹೆಚ್. ಪಟೇಲ್ ಮುಖ್ಯಮಂತ್ರಿಯಾದರು.
11ನೇ ವಿಧಾನಸಭೆ ಚುನಾವಣೆಯಲ್ಲಿ ಜನತಾದಳ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. 1999ರ ಅಕ್ಟೋಬರ್ 11 ರಂದು ಎಸ್.ಎಂ. ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾದರು. ಆದರೆ 12ನೇ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ರಚನೆಗೆ ವೇದಿಕೆ ನಿರ್ಮಾಣವಾಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ 2004 ರ ಮೇ 28 ರಂದು ಕಾಂಗ್ರೆಸ್ನ ಧರಂ ಮುಖ್ಯಮಂತ್ರಿಯಾದರು. ಆದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರ ರಚನೆಯಾದ ಕಾರಣ 2006 ರ ಫೆಬ್ರವರಿ 3 ರಂದು ಜೆಡಿಎಸ್ನ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಮೈತ್ರಿ ಒಪ್ಪಂದದಂತೆ 20 ತಿಂಗಳ ನಂತರ ಬಿಜೆಪಿಗೆ ಸಿಎಂ ಸ್ಥಾನ ಬಿಟ್ಟು ಕೊಡಲಿಲ್ಲ. ಆದ್ರೆ 2007 ರ ನವೆಂಬರ್ 12 ರಂದು ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಆಗ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ಕೊಡ್ತಿಲ್ಲ ಎಂದು ಯಡಿಯೂರಪ್ಪ ರಾಜೀನಾಮೆ ನೀಡಿದ್ದರು.
ನಂತರ 13ನೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. 2008ರ ಮೇ 30 ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಲೋಕಾಯುಕ್ತ ವರದಿಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು. ಹಾಗಾಗಿ 2011ರ ಆಗಸ್ಟ್ 5 ರಂದು ಡಿವಿ ಸದಾನಂದಗೌಡ ಮುಖ್ಯಮಂತ್ರಿಯಾದರು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಅವರೂ ರಾಜೀನಾಮೆ ನೀಡಿದ್ದರಿಂದ 2012ರ ಜುಲೈ 12 ರಂದು ಜಗದೀಶ್ ಶೆಟ್ಟರ್ ಸಿಎಂ ಗಾದಿಗೇರಿದರು.
14ನೇ ವಿಧಾನಸಭೆಗೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತು. 2013 ರ ಮೇ 13 ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಐದು ವರ್ಷ ಆಳ್ವಿಕೆ ಮಾಡಿದರು. ನಂತರ 15ನೇ ವಿಧಾನಸಭೆ ಚುನಾವನೆಯಲ್ಲಿ ಮತ್ತೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿದ್ದರಿಂದ ಬಿಜೆಪಿ ಸರ್ಕಾರ ರಚಿಸಿತು. 2018ರ ಮೇ 17 ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆ ರಾಜೀನಾಮೆ ನೀಡಬೇಕಾಯಿತು. ಇದರಿಂದಾಗಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿ 2018ರ ಮೇ 23ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾದರು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳಿಂದ ಒಂದೇ ವರ್ಷದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಯಿತು. 2019ರ ಜುಲೈ 26 ರಂದು ಯಡಿಯೂರಪ್ಪ ಸಿಎಂ ಆದರು. ಪಕ್ಷದಲ್ಲಿನ ಬದಲಾವಣೆಗಳಿಂದ ಎರಡು ವರ್ಷಕ್ಕೆ ಬಿಎಸ್ವೈ ರಾಜೀನಾಮೆ ನೀಡಿದ್ದರಿಂದ 2021ರ ಜುಲೈ 28 ರಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಹುದ್ದೆಗೇರಿದರು. ಇದೀಗ 16ನೇ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಮೇ 10 ರಂದು ಮತದಾನ ಮತ್ತು 13 ರಂದು ಫಲಿತಾಂಶ ಹೊರಬೀಳಲಿದೆ.
ಬಿಜೆಪಿ ಮಾಸ್ಟರ್ ಪ್ಲಾನ್: ರಾಜ್ಯ ರಾಜಕೀಯ ಇತಿಹಾಸದ ಹಿನ್ನೋಟ ಗಮನಿಸಿದರೆ 1985ರ ನಂತರ ಯಾವುದೇ ಪಕ್ಷ ಸತತ ಎರಡು ಬಾರಿ ಸ್ವತಂತ್ರವಾಗಿ ಸರ್ಕಾರ ರಚಿಸಿದ ಉದಾಹರಣೆಗಳೇ ಇಲ್ಲ. ಈ ಪರಂಪರೆ ಮುರಿದು ಅಧಿಕಾರಕ್ಕೇರಲು ಬಿಜೆಪಿ ಸಾಕಷ್ಟು ತಂತ್ರಗಾರಿಕೆ ರೂಪಿಸಿದ್ದು, ಸಫಲವಾದಲ್ಲಿ ಮೂರೂವರೆ ದಶಕದ ನಂತರ ರಾಜ್ಯದಲ್ಲಿ ಪಕ್ಷವೊಂದು ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದ ಇತಿಹಾಸ ನಿರ್ಮಾಣವಾಗಲಿದೆ.
ಇದನ್ನೂ ಓದಿ: ರಾಜ್ಯ ರಚನೆಯಾದ ಬಳಿಕ ಪೂರ್ಣಾವಧಿ ಆಡಳಿತ ಕೊಟ್ಟವರು ಕೇವಲ ಮೂವರು ಮುಖ್ಯಮಂತ್ರಿಗಳು ಮಾತ್ರ!