ಬೆಂಗಳೂರು: ರಾಜ್ಯ ರಾಜಧಾನಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಬಹುಪಾಲು ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್, ಮಹಾನಗರ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಅಳೆದು ತೂಗಿ ಮಾಡುತ್ತಿದೆ. ರಾಜ್ಯ ರಾಜಕಾರಣದಲ್ಲಿ ಬೆಂಗಳೂರು ನಗರದ ವಿಧಾನಸಭೆ ಕ್ಷೇತ್ರಗಳಿಗೆ ವಿಶೇಷ ಸ್ಥಾನಮಾನ ಸದಾ ಇರುತ್ತದೆ. ಸಿಲಿಕಾನ್ ಸಿಟಿಯಲ್ಲಿ ಮೇಲುಗೈ ಸಾಧಿಸುವುದು ಪ್ರತಿ ಸಾರಿಯೂ ಪ್ರತಿಷ್ಠೆಯ ಸಂಕೇತವಾಗಿ ಉಳಿಯಲಿದೆ. ಮಹಾನಗರದಲ್ಲಿನ ತಮ್ಮ ಹಿಡಿತವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಅಭ್ಯರ್ಥಿಗಳ ಆಯ್ಕೆ ಸಂಬಂಧ ಹೈಕಮಾಂಡ್ ಜೊತೆ ರಾಜ್ಯ ನಾಯಕರು ಚರ್ಚಿಸಿದ್ದಾರೆ.
ಹಿಂದಿನ ಚುನಾವಣೆ ಪರಿಸ್ಥಿತಿ: 2018ರಲ್ಲಿ ಕಾಂಗ್ರೆಸ್ ಪಕ್ಷ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಆನೇಕಲ್ ಸೇರಿದಂತೆ ಒಟ್ಟು 28 ಕ್ಷೇತ್ರಗಳ ಪೈಕಿ 15ರಲ್ಲಿ ಗೆಲುವು ಸಾಧಿಸಿತ್ತು. 2019ರಲ್ಲಿ ಬಿಜೆಪಿ ಆಪರೇಷನ್ ಕಮಲದಿಂದಾಗಿ ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ, ಬೈರತಿ ಬಸವರಾಜು, ಎಸ್ ಟಿ ಸೋಮಶೇಖರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇವರ ಜೊತೆ ಶಿವಾಜಿನಗರ ಶಾಸಕರಾಗಿದ್ದ ರೋಷನ್ ಬೇಗ್ ಸಹ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ, ಕೆಆರ್ ಪುರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಹಿಡಿತವನ್ನು ಕಾಂಗ್ರೆಸ್ ಕಳೆದುಕೊಂಡಿತ್ತು. ಆದರೆ ಶಿವಾಜಿನಗರದಲ್ಲಿ ರಿಜ್ವಾನ್ ಹರ್ಷದ್ ಗೆಲ್ಲುವ ಮೂಲಕ ಪಕ್ಷಕ್ಕೆ ಬಲ ತಂದು ಕೊಟ್ಟರು. ಹೀಗಾಗಿ ಸದ್ಯ ಮಹಾನಗರದಲ್ಲಿ ಸದ್ಯ ಕಾಂಗ್ರೆಸ್ ಕೇವಲ 12 ಶಾಸಕರ ಬಲ ಹೊಂದಿದೆ. ಆದ್ರೆ ಈ ಚುನಾವಣೆಯಲ್ಲಿ 18ಕ್ಕೂ ಹೆಚ್ಚು ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಳ್ಳುವುದು ಕಾಂಗ್ರೆಸ್ ನಾಯಕರ ಗುರಿಯಾಗಿದೆ.
ಕಳೆದ ತಿಂಗಳು 25ರಂದು ಕಾಂಗ್ರೆಸ್ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 124 ಅಭ್ಯರ್ಥಿಗಳನ್ನ ಅಂತಿಮಗೊಳಿಸಿತ್ತು. ಇದರಲ್ಲಿ ಬೆಂಗಳೂರಿನ 17 ಕ್ಷೇತ್ರಗಳು ಸೇರಿದ್ದವು. ಪಕ್ಷದ ಹಾಲಿ 12 ಶಾಸಕರ ಕ್ಷೇತ್ರಗಳು ಹಾಗೂ ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಿದೆ. ಮೊದಲ ಪಟ್ಟಿಯಲ್ಲಿ ಕಣಕ್ಕಿಳಿದ ಅಭ್ಯರ್ಥಿಗಳೆಂದರೆ ಬ್ಯಾಟರಾಯನಪುರ (ಕೃಷ್ಣ ಬೈರೇಗೌಡ), ರಾಜರಾಜೇಶ್ವರಿ ನಗರ (ಕುಸುಮಾ ಹನುಮಂತರಾಯಪ್ಪ), ಮಲ್ಲೇಶ್ವರ (ಅನೂಪ್ ಅಯ್ಯಂಗಾರ್), ಹೆಬ್ಬಾಳ (ಬೈರತಿ ಸುರೇಶ್), ಸರ್ವಜ್ಞ ನಗರ (ಕೆ.ಜೆ.ಜಾರ್ಜ್), ಶಿವಾಜಿ ನಗರ (ರಿಜ್ವಾನ್ ಅರ್ಷದ್), ಶಾಂತಿ ನಗರ (ಎನ್.ಎ. ಹ್ಯಾರೀಸ್), ಗಾಂಧಿ ನಗರ (ದಿನೇಶ್ ಗುಂಡೂರಾವ್), ರಾಜಾಜಿನಗರ (ಪುಟ್ಟಣ್ಣ) ಗೋವಿಂದ ರಾಜನಗರ (ಪ್ರಿಯ ಕೃಷ್ಣ), ವಿಜಯ ನಗರ (ಎಂ. ಕೃಷ್ಣಪ್ಪ), ಚಾಮರಾಜಪೇಟೆ (ಜಮೀರ ಅಹಮದ್ ಖಾನ್), ಬಸವನಗುಡಿ (ಯು. ಬಿ. ವೆಂಕಟೇಶ್), ಬಿಟಿಎಂ ಲೇಔಟ್ (ರಾಮಲಿಂಗಾ ರೆಡ್ಡಿ), ಜಯನಗರ (ಸೌಮ್ಯಾ ರೆಡ್ಡಿ), ಮಹದೇವಪುರ (ನಾಗೇಶ್ ಟಿ.), ಆನೇಕಲ್ (ಬಿ. ಶಿವಣ್ಣ) ಹೆಸರು ಘೋಷಿತವಾಗಿದೆ.
ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತ್ತಿದ್ದ ಕುಸುಮ ಹನುಮಂತ ರಾಯಪ್ಪಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಮಲ್ಲೇಶ್ವರದಿಂದ ಸ್ಪರ್ಧಿಸಿರುವ ಅನುಪ್ ಅಯ್ಯಂಗಾರ್, ರಾಜಾಜಿನಗರದಿಂದ ಮಾಜಿ ಎಂಎಲ್ಸಿ ಪುಟ್ಟಣ್ಣ, ಮಹದೇವಪುರದಿಂದ ಎಚ್. ನಾಗೇಶ್ ಕಣಕ್ಕಿಳಿದಿದ್ದಾರೆ. ಮುಳಬಾಗಿಲು ಕ್ಷೇತ್ರದ ಶಾಸಕರಾಗಿದ್ದ ಹಾಗೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಹೆಚ್.ನಾಗೇಶ್ ಅವರನ್ನು ಕಾಂಗ್ರೆಸ್ ಈ ಬಾರಿ ಮಹದೇವಪುರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿರುವುದು ವಿಶೇಷ. ಕಳೆದ ಸಾರಿ ಮಹದೇವಪುರದಿಂದ ಎ ಸಿ ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇನ್ನು ಮಲ್ಲೇಶ್ವರಂನಿಂದ ಈ ಸಾರಿ ಅನುಪ್ ಅಯ್ಯಂಗಾರ್ಗೆ ಅವಕಾಶ ನೀಡಲಾಗಿದ್ದು, ಕಳೆದ ಸಾರಿ ಮಾಜಿ ಸಚಿವ ಎಂಆರ್ ಸೀತಾರಾಮ್ಗೆ ಟಿಕೆಟ್ ಪೋಷಿಸಲಾಗಿತ್ತು. ಅವರು ಕಡೆಯ ಕ್ಷಣದಲ್ಲಿ ನಿರಾಕರಿಸಿದ ಹಿನ್ನೆಲೆ ಕೆಂಗಲ್ ಶ್ರೀಪಾದ ರೇಣು ಅವರಿಗೆ ಟಿಕೆಟ್ ನೀಡಲಾಗಿತ್ತು. ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಳೆದ ಸಾರಿ ಮಾಜಿ ಮೇಯರ್ ಜಿ ಪದ್ಮಾವತಿ ಕಣಕ್ಕಿಳಿದಿದ್ದರು. ಆದರೆ ಈ ಬಾರಿ ಬಿಜೆಪಿ ಎಂಎಲ್ಸಿ ಸ್ಥಾನ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿರುವ ಪುಟ್ಟಣ್ಣಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಅಳೆದು ತೂಗಿ ಪ್ರಕಟವಾಯ್ತು ಕಾಂಗ್ರೆಸ್ ಎರಡನೇ ಪಟ್ಟಿ..! ಹೀಗಿದೆ ಟಿಕೆಟ್ ಹಂಚಿಕೆ ಹಿಂದಿನ ಲೆಕ್ಕಾಚಾರ!
ಏಪ್ರಿಲ್ 6ರಂದು ಬಿಡುಗಡೆಯಾದ ಕಾಂಗ್ರೆಸ್ನ 42 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಬೆಂಗಳೂರಿನ ನಾಲ್ವರ ಹೆಸರುಗಳು ಇವೆ. ಯಲಹಂಕ (ಕೇಶವ ರಾಜಣ್ಣ ಬಿ.), ಯಶವಂತಪುರ (ಎಸ್. ಬಾಲರಾಜ್ ಗೌಡ), ಮಹಾಲಕ್ಷ್ಮೀ ಲೇಔಟ್ (ಕೇಶವಮೂರ್ತಿ), ಪದ್ಮನಾಭನಗರ (ವಿ. ರಘುನಾಥ ನಾಯ್ಡು) ಅಭ್ಯರ್ಥಿಗಳು ಎಂದು ಘೋಷಣೆ ಮಾಡಲಾಗಿದೆ. ಕಳೆದ ಸಾರಿ ಯಲಹಂಕದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ ಎನ್ ಗೋಪಾಲಕೃಷ್ಣ ಕಣಕ್ಕಿಳಿದಿದ್ದರು. ಅದೇ ರೀತಿ ಯಶವಂತಪುರದಿಂದ ಪಿ. ನಾಗರಾಜ್ ಸ್ಪರ್ಧಿಸಿದ್ದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭೆ ಕ್ಷೇತ್ರದಿಂದ ಕಳೆದ ಸಾರಿ ಎನ್ ಎಸ್ ವಿ ಐ ಮಾಜಿ ಅಧ್ಯಕ್ಷ ಹಾಗೂ ಯುವ ಕಾಂಗ್ರೆಸ್ ನಾಯಕ ಮಂಜುನಾಥ್ ಎಚ್ ಎಸ್ 2018ರಲ್ಲಿ ಹಾಗೂ 2019ರ ಉಪಚುನಾವಣೆಯಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ ಶಿವರಾಜು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪದ್ಮನಾಭನಗರ ವಿಧಾನಸಭೆ ಕ್ಷೇತ್ರದಿಂದ ಎಂ ಶ್ರೀನಿವಾಸ್ ಅಭ್ಯರ್ಥಿ ಆಗಿದ್ದರು.
ಘೋಷಣೆ ಬಾಕಿ ಇರುವ ಕ್ಷೇತ್ರಗಳು: ಮೂರನೇ ಪಟ್ಟಿಯಲ್ಲಿ ಚಿಕ್ಕಪೇಟೆ, ಕೆ. ಆರ್. ಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಸಿವಿ ರಾಮನ್ ನಗರ, ಪುಲಿಕೇಶಿ ನಗರ, ಬೆಂಗಳೂರು ದಕ್ಷಿಣ ಸೇರಿ 7 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಬೇಕಿದೆ. ಪುಲಿಕೇಶಿ ನಗರದಲ್ಲಿ ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಮಾಜಿ ಶಾಸಕ ಪ್ರಸನ್ನ ಕುಮಾರ್ ಅವರಿಂದ ತೀವ್ರ ಸ್ಪರ್ಧೆ ಇದೆ. ಚಿಕ್ಕಪೇಟೆಯಲ್ಲಿ ಮಾಜಿ ಶಾಸಕ ಆರ್. ವಿ. ದೇವರಾಜ್ ಈ ಸಾರಿ ತಮ್ಮ ಪುತ್ರ ಆರ್ ವಿ ಯುವರಾಜ್ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದು, ಇಲ್ಲಿಂದಲೇ ಸ್ಪರ್ಧೆಗೆ ಮಾಜಿ ಮೇಯರ್ಗಳಾದ ಪಿ. ಆರ್. ರಮೇಶ್, ಗಂಗಾಬಿಕೆ ಸಹ ಪೈಪೋಟಿ ನಡೆಸಿದ್ದಾರೆ.
ಕೆ. ಆರ್. ಪುರ ಕ್ಷೇತ್ರದಲ್ಲಿ ಬಿಜೆಪಿಯ ನಾಯಕ, ಮಾಜಿ ಶಾಸಕ ನಂದೀಶ್ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಇದೆ. ಬೊಮ್ಮನಹಳ್ಳಿಯಲ್ಲಿ ಅಭ್ಯರ್ಥಿ ಆಯ್ಕೆ ಅಷ್ಟೇನೂ ಕಷ್ಟಕರವಾಗಿಲ್ಲ. ಆದರೆ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಇನ್ನು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕೃಷ್ಣಮೂರ್ತಿ ಹಾಗೂ ನಾಗಭೂಷಣ್ ಆಕಾಂಕ್ಷಿಗಳಾಗಿದ್ದು, ತಮಗೆ ಟಿಕೆಟ್ ನೀಡುವಂತೆ ಬೆಂಬಲಿಗರ ಮೂಲಕ ಕಾಂಗ್ರೆಸ್ ಕಚೇರಿ ಮುಂದೆ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಸಹ ನಡೆಸಿದ್ದಾರೆ.
ಒಟ್ಟಾರೆ ಒಂದಿಷ್ಟು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೂ ಟಿಕೆಟ್ ಅಂತಿಮಗೊಳಿಸಿರುವ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಅಭ್ಯರ್ಥಿಗಳ ಆಯ್ಕೆಯಲ್ಲಿ ಎದುರಾಗಿರುವ ಸವಾಲಿನಷ್ಟು ಬೆಂಗಳೂರು ನಗರದ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಆಗಿಲ್ಲ. ಮೂರನೇ ಪಟ್ಟಿಯಲ್ಲಿ ಬಾಕಿ ಉಳಿದ ಕ್ಷೇತ್ರಗಳಿಗೂ ಟಿಕೆಟ್ ಅಂತಿಮಗೊಳಿಸಿ ಅತಿ ಹೆಚ್ಚು ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ.
ಹಳೇ ಬೇರು ಹೊಸ ಚಿಗುರು: ಬೆಂಗಳೂರು ಮಹಾನಗರದಲ್ಲಿ ಗೆಲುವು ಸಾಧಿಸುವುದು ಅಷ್ಟು ಸುಲಭ ಸಾಧ್ಯವಲ್ಲ. ಇದರಿಂದಲೇ ಕಾಂಗ್ರೆಸ್ ಪಕ್ಷ ಹಿರಿಯರಿಗೂ ಹೆಚ್ಚಿನ ಆದ್ಯತೆ ನೀಡಿ ಕಿರಿಯರನ್ನೂ ಪರಿಗಣಿಸಿ ಪಟ್ಟಿ ಸಿದ್ಧಪಡಿಸಿದೆ. ಹಿರಿಯರು ತಾವು ಗೆಲ್ಲುವ ಜೊತೆಗೆ ಕಿರಿಯರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿಯನ್ನ ಹೊಂದಿದ್ದಾರೆ. ಈ ಸಾರಿ ರಾಜ್ಯ ನಾಯಕರ ಕಾರ್ಯತಂತ್ರ ಫಲ ಕೊಡಲಿದ್ದು ಕಾಂಗ್ರೆಸ್ ಪಕ್ಷ ನಗರದಲ್ಲಿ ಅತಿ ಹೆಚ್ಚು ಸ್ಥಾನವನ್ನು ಗೆದ್ದುಕೊಳ್ಳಲಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ