ಬೆಂಗಳೂರು: ಯಡಿಯೂರಪ್ಪ ಅವರ ಪುತ್ರ ಎನ್ನುವ ಕಾರಣಕ್ಕೆ ನನಗೆ ಟಿಕೆಟ್ ಕೊಟ್ಟಿಲ್ಲ. ಹಾಗಿದ್ದರೆ ನನಗೆ ಕಳೆದ ಬಾರಿಯೇ ವರುಣಾ ಕ್ಷೇತ್ರದಿಂದ ಟಿಕೆಟ್ ಸಿಗುತ್ತಿತ್ತು. ಆದರೆ ಈ ಬಾರಿ ನನ್ನ ಸಂಘಟನಾತ್ಮಕ ಚಟುವಟಿಕೆ ನೋಡಿ ಟಿಕೆಟ್ ನೀಡಲಾಗಿದೆ. ಏಪ್ರಿಲ್ 19 ರಂದು ನಾನು ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್ವೈ ಪುತ್ರ ಎನ್ನುವ ಕಾರಣಕ್ಕೆ ಟಿಕೆಟ್ ನೀಡಲಾಗಿದೆ ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಆದರೆ ನಾನು ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿ ಈಗ ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸಂಘಟನೆ ಹೇಳಿದ ಜವಾಬ್ದಾರಿ ನಿರ್ವಹಣೆ ಮಾಡಿಕೊಂಡು ಬಂದಿದ್ದೇನೆ. ಒಂದು ವೇಳೆ ಯಡಿಯೂರಪ್ಪ ಮಗ ಅಂತ ಟಿಕೆಟ್ ಕೊಡುವುದೇ ಆಗಿದ್ದರೆ ಕಳೆದ ಬಾರಿಯೇ ವರುಣಾದಿಂದ ಟಿಕೆಟ್ ಸಿಗುತ್ತಿತ್ತು. ಇಂತಹ ಪರಿಪಾಠ ಈ ಪಕ್ಷದಲ್ಲಿ ಇಲ್ಲ, ಪಕ್ಷ ಅವಲೋಕನ ಮಾಡಿಯೇ ಎಲ್ಲರಿಗೂ ಟಿಕೆಟ್ ಕೊಡುತ್ತದೆ. ಹಾಗಾಗಿ ಬಿಎಸ್ವೈ ಮಗ ಅಂತ ಟಿಕೆಟ್ ಕೊಟ್ಟಿದಾರೆ ಅಂತ ನನಗೆ ಅನ್ನಿಸಿಲ್ಲ ಎಂದರು.
ಈ ಹಿಂದೆ ನನಗೆ ಉಪ ಚುನಾವಣೆಯ ಜವಾಬ್ದಾರಿ ಕೊಟ್ಟಾಗ ಶಿರಾ ಹಾಗೂ ಕೆ.ಆರ್.ಪೇಟೆಯಲ್ಲಿ ಪಕ್ಷಕ್ಕೆ ಗೆಲುವು ಸಿಕ್ಕಿತ್ತು. ಆದರೆ ಆ ಗೆಲುವು ವಿಜಯೇಂದ್ರನಿಂದ ಸಿಕ್ಕಿದ್ದಲ್ಲ, ಕಾರ್ಯಕರ್ತರ ಸಂಘಟನೆಯಿಂದ ನಾವು ಅಲ್ಲಿ ಆಗ ಗೆದ್ದೆವು, ವಿಜಯೇಂದ್ರ ಅನ್ನೋದು ನೆಪ ಮಾತ್ರ. ಈ ಬಾರಿಯ ಚುನಾವಣೆಗೆ ವರಿಷ್ಠರು ಹಾಗೂ ರಾಜ್ಯದ ನಾಯಕರು ನಿರಂತರವಾಗಿ ಪ್ರಚಾರ ಮಾಡಿದ್ದಾರೆ. ಕಾರ್ಯಕರ್ತರು ರಣೋತ್ಸಾಹದಲ್ಲಿ ಇದ್ದಾರೆ. ಸಂಘಟನೆಯ ಶಕ್ತಿಯ ಆಧಾರದ ಮೇಲೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.
ಕಾರ್ಯಕರ್ತರ ಅಭಿಪ್ರಾಯ ಮತ್ತು ಸರ್ವೆ ಆಧಾರದ ಮೇಲೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯವಿದೆ. ಕೇಂದ್ರದಿಂದ ಸರ್ವೆ ಮಾಡಿದ ಆಧಾರದ ಮೇಲೆ ಅವಕಾಶ ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷವಾಗಲಿ, ಬೇರೆ ಪಕ್ಷವಾಗಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿ ಟಿಕೆಟ್ ಘೋಷಣೆ ಮಾಡಿಲ್ಲ. ಬಿಜೆಪಿಯಲ್ಲಿ ಮಾತ್ರ ಇದು ಸಾಧ್ಯ. ಹಾಗಾಗಿ ನಾನು ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಮತ್ತು ನಡ್ಡಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಬಿ ವೈ ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: ಶೆಟ್ಟರ್ ಭವಿಷ್ಯ, ಈಶ್ವರಪ್ಪ ಉತ್ತರಾಧಿಕಾರಿ ಆಯ್ಕೆ ಕಗ್ಗಂಟು: 12 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸದ ಬಿಜೆಪಿ..!
ಟಿಕೆಟ್ ಕೈತಪ್ಪಿ ಕೆಲವೆಡೆ ಅಸಮಾಧಾನ ಎದ್ದಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಬಂಡಾಯ ಅನ್ನೋದು ಸಹಜ, ಪೈಪೋಟಿ ಸಹಜವಾಗಿ ಇದ್ದೇ ಇದೆ. ಇದೆಲ್ಲವನ್ನೂ ಕೂಡ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಪಕ್ಷದ ಅಧ್ಯಕ್ಷರು ಕುಳಿತು ಮಾತಾಡಿ ಸರಿಪಡಿಸುತ್ತಾರೆ. ಲಕ್ಷ್ಮಣ್ ಸವದಿ ಅವರಿಗೆ ಪಕ್ಷ ಏನೇನು ಕೊಟ್ಟಿದೆ ಅಂತ ಎಲ್ಲರಿಗೂ ಗೊತ್ತಿದೆ. ಇದನ್ನೆಲ್ಲಾ ಪಕ್ಷದ ಹಿರಿಯರು ಸರಿಪಡಿಸುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಪಕ್ಷದ ಹಿರಿಯ ನಾಯಕ ವಿ. ಸೋಮಣ್ಣಗೆ ಎರಡನೇ ಕ್ಷೇತ್ರವಾಗಿ ವರುಣಾದ ಟಿಕೆಟ್ ನೀಡಲಾಗಿದೆ. ವರುಣಾ ಸೇರಿದಂತೆ ಪಕ್ಷ ಎಲ್ಲಿ ಹೇಳುತ್ತೋ ಅಲ್ಲಿ ಪ್ರಚಾರ ಮಾಡುತ್ತೇನೆ. ಇದರಲ್ಲಿ ವಿಶೇಷತೆ ಏನೂ ಇಲ್ಲ. ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸುವುದು, ಪಕ್ಷದ ಸೂಚನೆ ಪಾಲಿಸುವುದು ಮಾತ್ರ ನಮ್ಮ ಕೆಲಸ. ಹಾಗಾಗಿ ಪಕ್ಷದ ಸೂಚನೆಯಂತೆ ನಡೆದುಕೊಳ್ಳುತ್ತೇವೆ. ಮುಂದಿನ ಸಿಎಂ ಯಾರು ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಮುಂದೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಅನ್ನೋದು ಮುಖ್ಯ ಅಲ್ಲ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರೋದು ಮುಖ್ಯ. ಆ ನಿಟ್ಟಿನಲ್ಲಿ ನಾವೆಲ್ಲಾ ಯೋಚಿಸಬೇಕು ಎಂದರು.
ಇದನ್ನೂ ಓದಿ: ಎರಡನೇ ಪಟ್ಟಿ ಪ್ರಕಟ.. ಬಿಜೆಪಿ ಏಳು ಹಾಲಿ ಶಾಸಕರ ಬದಲಿಗೆ ಟಿಕೆಟ್ ಪಡೆದ ಹೊಸ ಅಭ್ಯರ್ಥಿಗಳಿವರು