ಕಲಬುರಗಿ: ಕಾಂಗ್ರೆಸ್ ಭದ್ರಕೋಟೆ ಜೇವರ್ಗಿಯಲ್ಲಿ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರನ್ನು ಸೋಲಿಸಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ್ದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ.
ಜೇವರ್ಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಕಾರಣ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಜೇವರ್ಗಿಯ ಬೂತಪುರ ಕಲ್ಯಾಣ ಮಂಟಪದಲ್ಲಿಂದು ಕರೆದ ಸಭೆಯಲ್ಲಿ ಘೋಷಿಸಿದರು. ನಾನು ಮೋಸ, ಕಳ್ಳತನ, ಲೂಟಿ ಮಾಡಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಜನರ ಕೆಲಸ ಮಾಡಿದ್ದೇನೆ. ಹೊಟ್ಟೆಕಿಚ್ಚಿನಿಂದ ಕೆಲವರು ಟಿಕೆಟ್ ತಪ್ಪಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
21 ವರ್ಷಗಳ ಕಾಲ ಜೇವರ್ಗಿ ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಕಾರ್ಯಕರ್ತರೊಡನೆ ಬೇರು ಮಟ್ಟದಿಂದ ದುಡಿದಿದ್ದೇನೆ. ಕಾರ್ಯಕರ್ತರಿಗೆ ನೋವಾದಾಗ ನಾನು ಯಾಕೆ ಪಕ್ಷದಲ್ಲಿ ಇರಬೇಕು? ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದರು.
2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂದು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ತೋರಿಸಬೇಕು. ಬೇರೆಯ ಪಕ್ಷದಿಂದಾಗಲಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಸ್ಪರ್ಧೆ ಮಾಡುತ್ತೇನೆ. ಎಲ್ಲರೂ ಸೇರಿ ಚುನಾವಣೆ ಮಾಡೋಣ ನಮ್ಮ ಶಕ್ತಿ ತೋರಿಸೋಣ ಎಂದು ಬೆಂಬಲಿಗೆ ಕರೆ ನೀಡಿದರು. ಟಿಕೆಟ್ ಕೈ ತಪ್ಪಿದ ವಿಷಯ ತಿಳಿದ ಅಭಿಮಾನಿಗಳು, ನಿನ್ನೆಯಿಂದ ಊಟ ಮಾಡಿಲ್ಲ ಹಾಗೂ ಸರಿಯಾಗಿ ನಿದ್ದೆಯೂ ಕೂಡಾ ಮಾಡಿಲ್ಲ. ಯಾರು ಕೂಡಾ ಹೇದರುವುದು ಬೇಡ, ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸೋಣ ಎಂದು ಧೈರ್ಯ ಹೇಳಿದರು.
ಎಚ್.ಡಿ.ಕುಮಾರಸ್ವಾಮಿಗೆ ಕರೆ?: ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಜೆಡಿಎಸ್ ಸೇರುವುದು ಬಹುತೇಖ ಖಚಿತವಾದಂತಿದೆ. ಕೇದರಲಿಂಗಯ್ಯ ಹಿರೇಮಠ ಕಾಂಗ್ರೆಸ್ ಸೇರಿದ ಮೇಲೆ ಜೆಡಿಎಸ್ ಇದುವರೆಗೆ ಯಾವುದೇ ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ. ಕೊನೆಯ ಗಳಿಗೆವರೆಗೆ ಕಾಯುವ ತಂತ್ರ ಅನುಸರಿಸಿದೆ. ಇದೀಗ ನರಿಬೋಳ ಅವರಿಗೆ ಟಿಕೆಟ್ ಸಿಗದಿರುವ ವಿಚಾರ ಗೊತ್ತಾಗಿ ರಾತ್ರಿಯೇ ಎಚ್.ಡಿ. ಕುಮಾರಸ್ವಾಮಿ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ನಾಳೆ ಕುಮಾರಸ್ವಾಮಿ ಕಲಬುರಗಿ ಆಗಮಿಸಲಿದ್ದು, ದೊಡ್ಡಪ್ಪಗೌಡ ಜೆಡಿಎಸ್ ಸೇರ್ತಾರೆ ಎನ್ನಲಾಗುತ್ತಿದೆ.
ಶಿವಾನಂದಗೌಡ ಪಾಟೀಲ್ ರದ್ದೆವಾಡಗಿಗೆ ಬಿಜೆಪಿ ಟಿಕೆಟ್: ದೊಡ್ಡಪ್ಪಗೌಡ ಬದಲಾಗಿ ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವಾನಂದಗೌಡ ಪಾಟೀಲ್ ರದ್ದೆವಾಡಗಿಗೆ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ: ಕೈ ತಪ್ಪಿದ ಬೈಲಹೊಂಗಲ ಟಿಕೆಟ್: ಬಿಜೆಪಿ ವಿರುದ್ಧ ಡಾ.ವಿಶ್ವನಾಥ ಪಾಟೀಲ ಬಂಡಾಯ