ಬೆಂಗಳೂರು: ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಛಳ ಬಹುಮತ ನೀಡಿದ್ದಾರೆ. ನನ್ನ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೇಳಿದ್ದೆ, ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು. ಅದೇ ರೀತಿ ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದಿಂದ ಪಕ್ಷಕ್ಕೆ ಈ ಯಶಸ್ಸು ಸಿಕ್ಕಿದೆ.
ನಾನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟ ಮಾತಿನಂತೆ ನಾನು ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದೇನೆ. ನನ್ನ ಮೇಲೆ ಬಿಜೆಪಿ ಷಡ್ಯಂತ್ರ ರೂಪಿಸಿ ಬಿಜೆಪಿ ಸೇರಬೇಕು ಅಥವಾ ಜೈಲಿಗೆ ಹೋಗಬೇಕು ಎಂಬ ಆಯ್ಕೆ ಇಟ್ಟಾಗ ನಾನು ಜೈಲಿಗೆ ಹೋಗುವುದನ್ನು ಆರಿಸಿಕೊಂಡೆ. ಆಗ ಸೋನಿಯಾ ಗಾಂಧಿ ಅವರು ತಿಹಾರ್ ಜೈಲಿಗೆ ಬಂದು ನನ್ನನ್ನು ಭೇಟಿ ಮಾಡಿದ್ದರು. ಅವರು ನನ್ನ ಮೇಲೆ ಅಷ್ಟು ನಂಬಿಕೆ ಇಟ್ಟಿದ್ದರು.
ಇದು ಒಬ್ಬನಿಂದ ಬಂದಿರುವ ಯಶಸ್ಸಲ್ಲ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಶಾಸಕರುಗಳು, ಎಐಸಿಸಿ ಪದಾಧಿಕಾರಿಗಳು, ಉಸ್ತುವಾರಿಗಳು, ರಾಜ್ಯದ ನಾಯಕರುಗಳು, ಪಕ್ಷದ ಪದಾಧಿಕಾರಿಗಳು, ಬೂತ್ ಮಟ್ಟದಲ್ಲಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿರುವ ಎಲ್ಲ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ನಾನು ಈಗ ಹೆಚ್ಚಾಗಿ ಏನು ಮಾತನಾಡುವುದಿಲ್ಲ. ಕಾರ್ಯಕರ್ತರು ಉತ್ಸಾಹದಿಂದ ಗಲಾಟೆ ಮಾಡುತ್ತಿದ್ದಾರೆ ಎಂದು ನನ್ನ ಚುನಾವಣಾ ಪ್ರಮಾಣಪತ್ರ ಪಡೆಯಲು ನಾನೇ ಹೋಗಬೇಕು ಎಂದು ರಾಮನಗರ ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ನಾನು ಅಲ್ಲಿಗೆ ಹೋಗುತ್ತಿದ್ದು, ಅಲ್ಲಿಂದ ಬಂದ ನಂತರ ನನ್ನ ದೇವಾಲಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾತನಾಡುತ್ತೇನೆ.
ಕೆಪಿಸಿಸಿ ಕಚೇರಿಯೇ ದೇಗುಲ: ಗೆಲುವಿನ ಬೆನ್ನಲ್ಲೇ ರಾಮನಗರದಲ್ಲಿ ಕಾರ್ಯಕರ್ತರು ಗಲಾಟೆ ಮಾಡುತ್ತಾ ಇದ್ದಾರೆ. ಮೊದಲಿಗೆ ನಾನು ರಾಮನಗರ ಹೋಗಿ ಬರುತ್ತೇನೆ. ಕಚೇರಿ ನನಗೆ ದೇಗುಲ, ರಾಮನಗರದಿಂದ ಬಂದು ಕೆಪಿಸಿಸಿಗೆ ಬಂದು ಮಾತಾಡುತ್ತೇನೆ ಎಂದರು.
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಕಣಕ್ಕೆ ಇಳಿಸುವ ಮೂಲಕ ಡಿಕೆ ಶಿವಕುಮಾರ್ ಕಟ್ಟಿ ಹಾಕುವ ಪ್ರಯತ್ನವನ್ನು ಬಿಜೆಪಿ ನಡೆಸಿದರು. ಆದರೆ, ತಮ್ಮ ಕ್ಷೇತ್ರದಲ್ಲಿ ಸತತ 7ನೇ ಬಾರಿಗೆ ಗೆಲುವು ದಾಖಲಿಸುವ ಮೂಲಕ ಕನಕಪುರ ಕ್ಷೇತ್ರ ತಮ್ಮ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದೆ. ಆರ್ ಅಶೋಕ್ ವಿರುದ್ಧ 1 ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.
ಬಿಜೆಪಿ ದುರಾಡಳಿತದಿಂದ ಬೇಸತ್ತ ಜನ: ಗೆಲುವಿನ ಬಳಿಕ ಮಾತನಾಡಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಬಿಜೆಪಿಯ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ರಾಜ್ಯಕ್ಕೆ ಎಷ್ಟೇ ಬಾರಿ ಪ್ರಧಾನಿ ಮೋದಿ- ಶಾ ಬಂದರೂ ಯಾವುದೇ ಮ್ಯಾಜಿಕ್ ನಡೆಯುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ಗೆ ಪ್ರಚಂಡ ಗೆಲುವು: ಡಿಕೆಶಿ ಭಾವುಕ ನುಡಿ- ವಿಡಿಯೋ