ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ ಹೋರಾಟಕ್ಕೆ ಜನ ಮನ್ನಣೆ ನೀಡಿದ್ದು, ಸರ್ಕಾರ ರಚನೆ ಹಂತಕ್ಕೆ ತಲುಪಿಸಿದೆ. ರಾಜ್ಯ ಸರ್ಕಾರದ ವಿವಿಧ ಭ್ರಷ್ಟಾಚಾರಗಳನ್ನು ಕಾಲಕಾಲಕ್ಕೆ ಪ್ರಸ್ತಾಪಿಸಿ ಹೋರಾಟ ನಡೆಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ತನ್ನ ಪ್ರತಿಪಕ್ಷ ಸ್ಥಾನವನ್ನ ನಾಲ್ಕು ವರ್ಷ ನಿಭಾಯಿಸಿತ್ತು. ಹತ್ತು ಹಲವು ಹೋರಾಟಗಳಲ್ಲಿ ಸರ್ಕಾರದ ವಿರುದ್ಧ ನಡೆಸಿದ ಅತ್ಯಂತ ಯಶಸ್ವಿ ಪ್ರಯತ್ನ 40 ಪರ್ಸೆಂಟ್ ಭ್ರಷ್ಟಾಚಾರ ವಿರುದ್ಧ ಹೋರಾಟ. ರಾಜ್ಯ ಸರ್ಕಾರ ಪ್ರತಿ ಕಾಮಗಾರಿಯಲ್ಲೂ 40% ರಷ್ಟು ಕಮಿಷನ್ ಪಡೆಯುತ್ತದೆ ಎಂದು ಆರೋಪಿಸಿ ನಡೆಸಿದ ಹೋರಾಟ ಅತ್ಯಂತ ಸುದೀರ್ಘ ಅವಧಿಯದ್ದಾಗಿದ್ದು, ಕಾಂಗ್ರೆಸ್ ಪಾಲಿಗೆ ಅತ್ಯಂತ ಯಶಸ್ವಿ ಹೋರಾಟವಾಗಿ ಲಭಿಸಿತ್ತು. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ಒಕೊರಲ್ಲಿನಿಂದ ನಡೆಸಿದ ಹೋರಾಟಕ್ಕೆ ಇದೀಗ ಜನರು ಸಹ ಸಹಮತದ ಮುದ್ರೆ ಒತ್ತಿದ್ದಾರೆ.
ಸರಿಯಾದ ಸಮಯದಲ್ಲಿ ಹೋರಾಟ: ಕರ್ನಾಟಕ ವಿಧಾನಸಭೆ ಚುನಾವಣೆಗೆ ವಾರಗಳು ಮುಂಚಿತವಾಗಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿಕೊಂಡು ಪೋಸ್ಟರ್‌ಗಳು ಏಪ್ರಿಲ್ 19 ರಂದು ಬೆಂಗಳೂರಿನಾದ್ಯಂತ ಕಂಡುಬಂದವು. ಪೋಸ್ಟರ್‌ಗಳಲ್ಲಿ, ಕ್ಯೂಆರ್ ಕೋಡ್‌ನ ಚಿತ್ರದ ಮೇಲೆ ಬೊಮ್ಮಾಯಿ ಅವರ ಚಿತ್ರವನ್ನು ಅಂಟಿಸಲಾಗಿತ್ತು. ಮತ್ತು ಮೇಲೆ ಬರೆಯಲಾದ 'ಪೇಸಿಎಂ' ಎಂಬ ಪದಗುಚ್ಛ ವಿಶೇಷವಾಗಿ ಗಮನ ಸೆಳೆಯುತ್ತಿತ್ತು. ಕಾಂಗ್ರೆಸ್ ಪಕ್ಷ ಆಂಟಿಸಿದ್ದ ಪೋಸ್ಟರ್ಗಳಲ್ಲಿ ನೀಡಿದ್ದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಅದು ಪ್ರತಿಪಕ್ಷ ಕಾಂಗ್ರೆಸ್ ಸ್ಥಾಪಿಸಿದ '40 ಪ್ರತಿಶತ ಸರ್ಕಾರ' ವೆಬ್‌ಸೈಟ್‌ಗೆ ಪ್ರವೇಶ ಒದಗಿಸುತ್ತಿತ್ತು. ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧತೆ ದೊಡ್ಡ ಅಭಿಯಾನದ ರೂಪದಲ್ಲಿ ಪೇ ಸಿಎಂ ಪೋಸ್ಟರ್ ಗಳನ್ನ ಅಂಟಿಸಿದ ಕಾಂಗ್ರೆಸ್ ರಾಜ್ಯ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಇದನ್ನೇ ಮುಂದುವರಿಸಿಕೊಂಡು ಸಾಗಿದ ಕಾಂಗ್ರೆಸ್ ನಾಯಕರು ಅಂತಿಮವಾಗಿ ಜನರ ಮುಂದೆ 40% ಭ್ರಷ್ಟಾಚಾರ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಮನವಿ ಮಾಡಿದರು. ಇದಕ್ಕೆ ಮನ್ನಣೆ ನೀಡಿದ ಮತದಾರರು ಆಡಳಿತ ಪಕ್ಷವನ್ನು ನಿರ್ಲಕ್ಷಿಸಿ ಕಾಂಗ್ರೆಸ್ ಗೆ ಅಧಿಕಾರ ನೀಡುವ ಕಾರ್ಯ ಮಾಡಿದ್ದಾರೆ.
ಬಿಜೆಪಿ ವಿರುದ್ಧ ಭ್ರಷ್ಟಚಾರ ಆರೋಪ: ಬಿಜೆಪಿ ನಾಯಕರು ಮತ್ತು ಅಧಿಕಾರಿಗಳು ರಾಜ್ಯದ ಅನುದಾನಿತ ಮೂಲಸೌಕರ್ಯ ಯೋಜನೆಗಳಿಗೆ ಟೆಂಡರ್ ಮೊತ್ತದ ಶೇಕಡಾ 40 ರಷ್ಟು ಲಂಚವಾಗಿ ತೆಗೆದುಕೊಳ್ಳುತ್ತಾರೆ ಎಂಬ ಕರ್ನಾಟಕದ ಗುತ್ತಿಗೆದಾರರ ಆರೋಪಗಳಿಗೆ '40 ಪರ್ಸೆಂಟ್ ಸರ್ಕಾರ' ಎಂಬ ಹೋರಾಟದ ರೂಪವನ್ನು ಕಾಂಗ್ರೆಸ್ ನೀಡಿದ್ದು. ಇದೇ ಮಾದರಿಯ ಪೋಸ್ಟರ್ - 40% ಸಿಎಂಗೆ ಸ್ವಾಗತ' - ಹೈದರಾಬಾದ್‌ನಲ್ಲಿ ಕರ್ನಾಟಕ ಸಿಎಂ ಬಿಜೆಪಿಯ ಹೈದರಾಬಾದ್ 'ವಿಮೋಚನಾ ದಿನ' ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಾಗ ಕಂಡುಬಂದಿತ್ತು. ಇದನ್ನೇ ಪ್ರಮುಖ ವಿಚಾರವಾಗಿ ಇರಿಸಿಕೊಂಡು ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿತ್ತು.
ರಾಜ್ಯ ಸರ್ಕಾರದ ವಿರುದ್ಧ ಆಂದೋಲನಕ್ಕೆ ಬೆಂಗಳೂರಿನಲ್ಲಿಯೇ ಕಾಂಗ್ರೆಸ್ ಪಕ್ಷ ಚಾಲನೆ ನೀಡಿತ್ತು. ರೇಸ್ ಕೋರ್ಸ್ ರಸ್ತೆಯಲ್ಲಿ ಗೋಡೆಗಳಿಗೆ ಪೇ ಸಿಎಂ ಪೋಸ್ಟರ್ ಆಂಟಿಸುವ ಹೋರಾಟವನ್ನು ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮುಂತಾದವರು ಚಾಲನೆ ನೀಡಿದ್ದರು.
ರಾಜ್ಯ ಸರ್ಕಾರದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರ, ವಿವಿಧ ಇಲಾಖೆಗಳಲ್ಲಿ ಲಂಚ ಪಡೆಯುವ ಆರೋಪ ಸೇರಿದಂತೆ ಹಲವು ಹೋರಾಟಗಳನ್ನು ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ನಡೆಸಿತ್ತು. ಆದರೆ ಅವುಗಳಲ್ಲಿ 40% ಭ್ರಷ್ಟಾಚಾರ ಸರ್ಕಾರ ಹೋರಾಟ ಅತ್ಯಂತ ಜನಪ್ರಿಯ ಹಾಗೂ ಕಾಂಗ್ರೆಸ್ ನಾಯಕರಿಗೆ ಧನಾತ್ಮಕ ಫಲವನ್ನು ನೀಡಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವನ್ನು ಬೀಳಿಸಿ ಕಾಂಗ್ರೆಸನ ಅಧಿಕಾರದ ಗದ್ದುಗೆಗೆ ಏರಿಸುವಲ್ಲಿ ಸಫಲತೆಯನ್ನು ತಂದುಕೊಟ್ಟಿದೆ.
ಇದನ್ನೂ ಓದಿ: ರಾಜ್ಯದಲ್ಲಿ ನಡೆಯದ ಮೋದಿ- ಶಾ ಮ್ಯಾಜಿಕ್; ಕೈ ಕೊಟ್ಟ ಹೊಸ ಪ್ರಯೋಗ