ಮಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ 60 ರಿಂದ 65 ಕಡೆ ಸಮರ್ಥ ಅಭ್ಯರ್ಥಿಗಳು ಇಲ್ಲ. ಅದಕ್ಕೆ 160 ಫೈನಲ್ ಮಾಡಿ ನಿಲ್ಲಿಸಿ ಬಿಟ್ಟಿದ್ದಾರೆ. ಆರಂಭ ಶೂರತ್ವ ತೋರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು ಕಾಂಗ್ರೆಸ್ನಲ್ಲಿ 60 ರಿಂದ 65 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಇಲ್ಲ. ಅದಕ್ಕೆ 160 ಮಾಡಿ ಅರ್ಧದಲ್ಲಿ ನಿಲ್ಲಿಸಿಬಿಟ್ಟಿದ್ದಾರೆ. ಇವತ್ತಿನವರೆಗೆ ಪಟ್ಟಿ ಬಿಡುಗಡೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಅದರ ಅರ್ಥ ಆಮದು ಮಾಡುವ ರಾಜನೀತಿ. ಸಮರ್ಥ ಅಭ್ಯರ್ಥಿ ಅವರಲ್ಲಿ ಇಲ್ಲ ಎಂದು ಅವರು ಲೇವಡಿ ಮಾಡಿದರು.
ಬಿಜೆಪಿ ಪಕ್ಷ 12 ಕ್ಷೇತ್ರಗಳನ್ನು ಹೊರತುಪಡಿಸಿ, ಉಳಿದಲ್ಲ ಕಡೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕೆಲವು ಕಡೆ ಆಕಾಂಕ್ಷಿಗಳು, ಎಂಎಲ್ಸಿಗಳು ರಾಜೀನಾಮೆ ನೀಡಿದ್ದಾರೆ. ಆದರೆ ರಾಜೀನಾಮೆ ಕೊಟ್ಟಂತಹ ಎಲ್ಲಾ ಕಡೆ ಮಾತನಾಡಲಾಗಿದೆ. ಹಿರಿಯರು ಮತ್ತು ನಾನು ಮಾತನಾಡಿದ್ದೇನೆ. ಚುನಾವಣೆ ವೇಳೆ ಆ ಕಡೆ ಅವರು ಈ ಕಡೆ, ಈ ಕಡೆಯವರು ಆ ಕಡೆ ಹೋಗುವುದು ಸಾಮಾನ್ಯ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಕೈತಪ್ಪಿದ ಟಿಕೆಟ್.. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಆಕಾಂಕ್ಷಿ ನಿರ್ಧಾರ
ಸವದಿ ಮನವೊಲಿಸಲು ಸಮಯ ಬೇಕು: ಲಕ್ಷ್ಮಣ ಸವದಿ ಅವರ ಮನವೊಲಿಸಲು ಸಮಯ ಬೇಕು. ಅವರು ಸೀನಿಯರ್ ಇದ್ದಾರೆ. ಅವರಿಗೆ ಭಾವನೆ ಇದೆ. ಅವರು ಸುದೀರ್ಘ ರಾಜಕೀಯ ಜೀವನದಲ್ಲಿದ್ದಾರೆ. ಕ್ಷೇತ್ರದ ಜನರ ವಿಶ್ವಾಸ ತೆಗೆದುಕೊಳ್ಳಬೇಕು. ಸ್ವಲ್ಪ ಸಮಯ ತೆಗೆದುಕೊಳ್ಳಬೇಕು. ಎಲ್ಲವು ಸರಿಯಾಗುತ್ತದೆ. ನನಗೆ ವಿಶ್ವಾಸವಿದೆ ಎಂದು ಹೇಳಿದರು.
ನೆಹರು ಓಲೇಕಾರ್ ಅವರು ಸಿಎಂ 1500 ಕೋಟಿ ಹಗರಣದಲ್ಲಿ ಇದ್ದಾರೆ ಎಂದು ಆರೋಪಿಸಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಅವರ ಹೇಳಿಕೆಯಿಂದ ಏನೂ ಆಗಲ್ಲ. ತನಿಖೆಯಾಗಲಿ ಎಂದರು.
ಇದನ್ನೂ ಓದಿ: ಮೂಡಿಗೆರೆ ಟಿಕೆಟ್ ಮಿಸ್: ಶಾಸಕ ಸ್ಥಾನಕ್ಕೆ ರಾಜೀನಾಮೆ, ಬಿಜೆಪಿಗೂ ಗುಡ್ ಬೈ ಹೇಳಿದ ಎಂಪಿ ಕುಮಾರಸ್ವಾಮಿ
212 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್: ಕಾಂಗ್ರೆಸ್ ಮತ್ತು ಜೆಡಿಎಸ್ಗಿಂತ ತಡವಾಗಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಆದ್ರೆ ಅವರೆಡೂ ಪಕ್ಷಗಳಿಗೆ ಹೋಲಿಸಿದ್ರೆ ಅತೀ ಹೆಚ್ಚಿನ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಈವರೆಗೆ 12 ಕ್ಷೇತ್ರ ಹೊರತುಪಡಿಸಿ 212 ಕ್ಷೇತ್ರಗಳಿಗೆ ಟಿಕೆಟ್ ಅನೌನ್ಸ್ ಮಾಡಿದೆ. ಮೊದಲ ಪಟ್ಟಿಯಲ್ಲಿ 189 ಮತ್ತು ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಆದ್ರೆ ಕಾಂಗ್ರೆಸ್ ಈವರೆಗೆ 166 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಮೊದಲ ಪಟ್ಟಿಯಲ್ಲಿ 124 ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿ ಆಯ್ಕೆ ಮಾಡಿದೆ. ಇನ್ನು ಜೆಡಿಎಸ್ ಮೊದಲ ಪಟ್ಟಿ ಪ್ರಕಟ ಮಾಡಿದ್ದು ಕೇವಲ 93 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿದೆ. 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 58 ಮತ್ತು ಜೆಡಿಎಸ್ 131 ಅಭ್ಯರ್ಥಿಗಳ ಹೆಸರು ಪ್ರಕಟಿಸುವುದು ಬಾಕಿ ಇದೆ.