ತುಮಕೂರು: ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಮತಕ್ಷೇತ್ರವೂ ಒಂದು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಆಪ್ ಪಕ್ಷದ ವತಿಯಿಂದ ಈಗಾಗಲೇ ಟಿಕೆಟ್ ಘೋಷಣೆಯಾಗಿದ್ದರಿಂದ ಕ್ಷೇತ್ರ ರಂಗು ಪಡೆದಿದೆ. ಬಿಜೆಪಿಯಿಂದ ಹಾಲಿ ಶಾಸಕ ಜೆಸಿ ಮಾಧುಸ್ವಾಮಿಗೆ ಟಿಕೆಟ್ ನೀಡಲಾಗಿದ್ದು, ಕಾಂಗ್ರೆಸ್ ಪಕ್ಷ ಕಿರಣ್ ಕುಮಾರ್ ಅವರನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ. ಇನ್ನು ಜೆಡಿಎಸ್ ಸಿಬಿ ಸುರೇಶ ಬಾಬುಗೆ ಟಿಕೆಟ್ ಘೋಷಣೆ ಮಾಡಿದ್ದರೆ, ಆಪ್ ಪಕ್ಷದಿಂದ ನಿಂಗರಾಜು.ಸಿ ಎನ್ನುವವರು ಕಣಕ್ಕಿಳಿದಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ಮತಬೇಟೆ ಆರಂಭಿಸಿದ್ದು ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ಹಾಲಿ ಶಾಸಕ ಜೆಸಿ ಮಾಧುಸ್ವಾಮಿ ಮತ್ತೆ ಗೆದ್ದು ಕ್ಷೇತ್ರದಲ್ಲಿ ಅಧಿಕಾರ ವಿಸ್ತರಿಸುವ ಆಸೆ ಹೊಂದಿದ್ದರೆ ಅವರ ಗೆಲುವಿಗೆ ಪ್ರತಿರೋಧ ನೀಡಲು ಪ್ರತಿಸ್ಪರ್ಧಿಗಳು ನಾನಾ ಕಸರತ್ತು ನಡೆಸಿದ್ದಾರೆ. ಇಲ್ಲಿ ಪಕ್ಷಕ್ಕಿಂತ ಅಭ್ಯರ್ಥಿಗೆ ಪ್ರಾಮುಖ್ಯತೆ ಹೆಚ್ಚು. ಸದ್ಯ ಹಾಲಿ ಶಾಸಕರಾದ ಮಾಧುಸ್ವಾಮಿ ಬಿಜೆಪಿಗೂ ಮುನ್ನ ಕೆಜೆಪಿ, ಜೆಡಿಯು, ಜೆಡಿಎಸ್, ಜೆಡಿ (ಜನತಾ ದಳ) ಪಕ್ಷದಿಂದಲೂ ಸ್ಪರ್ಧೆ ಮಾಡಿದ್ದರು. 1989ರಲ್ಲಿ ಜನತಾ ದಳದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಪಕ್ಷದ ಕಿರಣ್ ಕುಮಾರ್ ಕೂಡ ಅಷ್ಟೇ ಪ್ರಬಲ ಹುರಿಯಾಳು. ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಇನ್ನು ಜೆಡಿಎಸ್ನಿಂದ ಎರಡು ಬಾರಿ ಆಯ್ಕೆಯಾದ ಸಿಬಿ ಸುರೇಶ ಬಾಬು ನಿರೀಕ್ಷೆಯಂತೆ ಮತ್ತೆ ಟಿಕೆಟ್ ಸಿಕ್ಕಿದ್ದು ಅದಾಗಲೇ ಮತಬೇಟೆ ಇಳಿದಿದ್ದಾರೆ. ಇವರ ನಡುವೆ ಆಪ್ ಪಕ್ಷ ಕೂಡ ತನ್ನ ಹುರಿಯಾಳನ್ನು ಈಗಾಗಲೇ ಮುಂದೆ ಬಿಟ್ಟಿದೆ.
ಕ್ಷೇತ್ರದ ವೈಶಿಷ್ಟ್ಯ: ವ್ಯವಸಾಯ ಹಾಗೂ ಹೈನುಗಾರಿಕೆಗೆ ಪ್ರಸಿದ್ಧವಾದ ಕ್ಷೇತ್ರವಿದು. ನಾನಾ ಕಾರಣಗಳಿಂದ ಗಮನ ಸೆಳೆಯುವ ಚಿಕ್ಕನಾಯಕನಹಳ್ಳಿ ಮತಕ್ಷೇತ್ರ, ರಾಜಕೀಯಿಂದಲೂ ಹಿಂದೆ ಸರಿದಿಲ್ಲ. ತುಮಕೂರು ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು ಅದರಲ್ಲಿ ಚಿಕ್ಕನಾಯಕನಹಳ್ಳಿಯು ಒಂದು. ಈ ಕ್ಷೇತ್ರದಲ್ಲಿ ಎರಡು ಬಾರಿ ಹೊರತುಪಡಿಸಿ ಒಬ್ಬ ಶಾಸಕ ನಿರಂತರ ಎರಡು ಅವಧಿಗೆ ಗೆದ್ದ ಉದಾಹರಣೆ ಇಲ್ಲ ಎಂಬ ಮಾತಿತ್ತು. ಆದರೆ, ಹಾಲಿ ಶಾಸಕ ಮಾಧುಸ್ವಾಮಿ 2018ರಲ್ಲಿ ಗೆಲ್ಲುವ ಮೂಲಕ ಆ ಮಾತನ್ನು ಸುಳ್ಳು ಮಾಡಿದವರು. ಬದಲಾದ ರಾಜಕೀಯ ಸನ್ನಿವೇಶಗಳಿಂದ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧೆ ಮಾಡಿದ್ದಲ್ಲದೇ ಮೂರು ಬಾರಿ ಗೆಲುವು ಕಂಡ ಮಾಧುಸ್ವಾಮಿ, ಇದೀಗ ನಾಲ್ಕನೇ ಬಾರಿ ಗೆಲುವಿಗಾಗಿ ಓಡಾಟ ನಡೆಸಿದ್ದಾರೆ. ಆದರೆ, ಈ ಬಾರಿ ಅವರ ಗೆಲವು ಅಷ್ಟು ಸಲುಭವಲ್ಲ ಎನ್ನುತ್ತಿದ್ದಾರೆ ರಾಜಕೀಯ ಚಿಂತಕರು.
ಕ್ಷೇತ್ರದ ಹಿನ್ನೆಲೆ: 1967 ರಿಂದ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಎರಡು ಬಾರಿ ಕ್ಷೇತ್ರದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಜೆಡಿಎಸ್ ಮೂರು ಬಾರಿ, ಜೆಡಿ, ಜೆಡಿಯು, ಕೆಸಿಪಿ, ಪಿಎಸ್‌ಪಿ, ಎನ್‌ಸಿಒ ತಲಾ ಒಂದು ಬಾರಿ ಗೆಲುವು ದಾಖಲು ಮಾಡಿದೆ. 1967ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಸಿಕೆಆರ್ ಸೆಟ್ಟಿ ಅತ್ಯಂತ ಕಡಿಮೆ ಅಂತರದಲ್ಲಿ ಗೆದ್ದರೆ, ಜೆಡಿಎಸ್ನ ಸಿಬಿ ಸುರೇಶಬಾಬು 2008 ರಲ್ಲಿ ಅತಿ ಹೆಚ್ಚು ಅಂತರದಲ್ಲಿ ಗೆದ್ದಿದ್ದು ಈ ಕ್ಷೇತ್ರದ ವೈಶಿಷ್ಟ್ಯ.
ಮೂರು ಚುನಾವಣೆ ಬಲಾಬಲಾ: 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಧುಸ್ವಾಮಿ, 69,612 ಮತಗಳನ್ನು ಪಡೆದು ಗೆಲುವು ಕಂಡು ಸಚಿವರೂ ಆದರು. ಇವರ ಪ್ರತಿಸ್ಪರ್ಧಿ ಜೆಡಿಎಸ್ನ ಸಿಬಿ ಸುರೇಶ್ ಬಾಬು 10,277 ಮತ ಪಡೆದು 2ನೆ ಸ್ಥಾನಕ್ಕೆ ಕುಸಿದರು. ಮಾಧುಸ್ವಾಮಿಯ ಗೆಲುವಿನ ಅಂತರ 59,335 ಮತಗಳು.
ಈ ಚುನಾವಣೆಯಲ್ಲಿ ಬಿಜೆಪಿ 38.77%, JD(S) 33.04% ಮತ್ತು INC 25.56% ಮತ ಗಳಿಸಿದ್ದವು. ಬಿಜೆಪಿ, ಜೆಡಿಎಸ್ ಮತ್ತು ಐಎನ್‌ಸಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ ಗಮನ ಸೆಳೆದಿತ್ತು. ಓರ್ವ ಮಹಿಳೆ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, 8 ಮಂದಿ ಠೇವಣಿ ಕಳೆದುಕೊಂಡರು. 4 ಪಕ್ಷೇತರ ಅಭ್ಯರ್ಥಿಗಳೊಂದಿಗೆ ಒಟ್ಟು 7 ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸಿದ್ದರು ಅನ್ನೋದು ವಿಶೇಷ. ಈ ಚುನಾವಣೆಯಲ್ಲಿ 85.79% ಪುರುಷ ಮತಗಳು ಮತ್ತು 83.53% ಮಹಿಳಾ ಮತಗಳು ಚಲಾವಣೆಯಾಗಿದ್ದವು. 2004ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2008ರ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನ ಪ್ರಮಾಣ ಕಂಡು ಬಂದಿದೆ.
2013ರ ಚುನಾವಣೆಯಲ್ಲಿ ಜೆಡಿಎಸ್ ಹುರಿಯಾಳು ಸಿಬಿ ಸುರೇಶ್ ಬಾಬು 60,759 ಮತ ಪಡೆದು ಗೆಲುವು ಬರೆದಿದ್ದರು. ಈ ಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಜೆಸಿ ಮಾಧುಸ್ವಾಮಿ 49,620 ಮತ ಪಡೆದು ಸೋಲು ಕಂಡಿದ್ದರು. ಈ ಚುನಾವಣೆಯಲ್ಲಿ ಸುರೇಶ್ ಬಾಬು 11,139 ಮತಗಳ ಅಂತರದಿಂದ ಗೆಲುವು ಬರೆದಿದ್ದರು.
2008ರ ಚುನಾವಣೆಯಲ್ಲಿಯೂ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದ ಸಿಬಿ ಸುರೇಶ್ ಬಾಬು 67,046 ಮತ ಪಡೆದು ವಿಧಾನಸಭೆ ಪ್ರವೇಶ ಮಾಡಿದ್ದರು. ಇವರ ವಿರುದ್ಧ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಕೆಎಸ್ ಕಿರಣ್ ಕುಮಾರ್ 38,002 ಮತ ಪಡೆದು ಸೋಲುಂಡಿದ್ದರು. 29,044 ಮತಗಳಿಂದ ಸುರೇಶ್ ಬಾಬು ಗೆಲುವು ದಾಖಲು ಮಾಡಿದ್ದರು.
ಒಟ್ಟು ಮತದಾರರ ಮಾಹಿತಿ: ಕ್ಷೇತ್ರದಲ್ಲಿ ಒಟ್ಟು 2,15,210 ಮತದಾರರಿದ್ದಾರೆ. ಈ ಪೈಕಿ 1,06,950 ಪುರುಷ ಮತದಾರು, 1,08,248 ಮಹಿಳಾ ಮತದಾರು, ಇತರ ಒಬ್ಬರು ಮತದಾರರಿದ್ದಾರೆ.
ಸದ್ಯ ಮತ್ತೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ ಕ್ಷೇತ್ರ ಗಮನ ಸೆಳೆಯುತ್ತಿದೆ. ಮೂರು ರಾಜಕೀಯ ಪಕ್ಷಗಳ ಬಲಾಬಲ ನೋಡಿದರೆ ಇದೇ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಬಹುದು ಅಂತ ಹೇಳುವುದು ಕಷ್ಟ. ಕ್ಷೇತ್ರವು ಮತದಾರರಲ್ಲಿಯೂ ಕುತೂಹಲ ತರಿಸಿದ್ದು ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ: ತುಮಕೂರು 11 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ: ಬಿರುಸುಗೊಂಡ ರಾಜಕೀಯ ಚಟುವಟಿಕೆ