ಬೆಂಗಳೂರು: ''ಬಿಜೆಪಿಯದ್ದು, ಡಬಲ್ ಎಂಜಿನ್ ಹಾಗೂ ಅಭಿವೃದ್ಧಿಪರ ಸರ್ಕಾರ. ಆದರೆ, ಕಾಂಗ್ರೆಸ್‍ನದು ಟ್ರಬಲ್ಡ್ ಎಂಜಿನ್ ಸರ್ಕಾರ'' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಿಶ್ಲೇಷಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ''ನಮ್ಮದು ಜನಹಿತ ಬಯಸುವ ಮತ್ತು ಕರ್ನಾಟಕದ ಜನತೆಯ ಆಶಯ ಈಡೇರಿಸುವ ಸರ್ಕಾರ. ಆದರೆ, ಕಾಂಗ್ರೆಸ್ ಪಕ್ಷವು ಅಧಿಕಾರದ ದಾಹದ ಹಿಂದಿದೆ. ಬಿಜೆಪಿಯ ಸರ್ಕಾರ ಜನರ ಸರ್ಕಾರವಾಗಿದೆ. ನಮ್ಮ ಸರ್ಕಾರ ರಾಜ್ಯ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸುತ್ತದೆ. ಆದರೆ, ಕಾಂಗ್ರೆಸ್ ಅವರದ್ದು ಪರಿವಾರವಾದದ (ಕುಟುಂಬ) ಸರ್ಕಾರ'' ಎಂದು ಆರೋಪಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಟಿಕೆಟ್ ಘೋಷಣೆ: ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಬಂಡಾಯ ಸ್ಫೋಟ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸೇರಿ ಡಬಲ್ ಎಂಜಿನ್ ಸರ್ಕಾರಗಳು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರು ಗಮನಿಸಲಿದ್ದಾರೆ. ಡಬಲ್ ಎಂಜಿನ್ ಸರ್ಕಾರಗಳಿಂದಾಗಿ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲೂ ಅಭಿವೃದ್ಧಿ ಕಾರ್ಯಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೇ ಮುಂದುವರಿದವು. ಇನ್ನೊಂದೆಡೆ ಆರೋಗ್ಯ ಸುರಕ್ಷತೆಗೆ ಗರಿಷ್ಠ ಒತ್ತು ಕೊಡಲಾಯಿತು'' ಈ ಮೂಲಕ ಕೊರೊನಾವನ್ನು ಕರ್ನಾಟಕ ಯಾವುದೇ ತೊಂದರೆ ಇಲ್ಲದೇ ಪರಿಣಾಮಕಾರಿಯಾಗಿ ಎದುರಿಸುವಲ್ಲಿ ಯಶಸ್ವಿಯಾಯಿತು ಎಂದು ಅವರು ವಿವರಿಸಿದರು.
ಪ್ರತಿಯೊಬ್ಬ ನಾಗರಿಕನಿಗೂ ಕೋವಿಡ್ ಲಸಿಕೆ ನೀಡುವ ಸಂದರ್ಭ ಬಂದಾಗ ಕಾಂಗ್ರೆಸ್ಸಿಗರು ಅಪಸ್ವರ ಎತ್ತಿದ್ದರು. ಆದರೆ, ಸರ್ಕಾರಗಳ ಬದ್ಧತೆಯಿಂದ 220 ಕೋಟಿ ಲಸಿಕೆಯನ್ನು ನೀಡಲಾಯಿತು. ಈ ಮೂಲಕ ವಿಶ್ವದ ಇತರ ರಾಷ್ಟ್ರಗಳಿಗೆ ಭಾರತ ಮಾದರಿಯಾಗಿದೆ. ರಾಜ್ಯದಲ್ಲಿ 12 ಕೋಟಿಗೂ ಹೆಚ್ಚು ಲಸಿಕೆ ಕೊಡಲಾಗಿದೆ'' ಎಂದು ಅವರು ಅಂಕಿ- ಅಂಶ ಸಮೇತ ರಾಜ್ಯ ಮತ್ತು ಕೇಂದ್ರದ ನೀತಿಗಳನ್ನು ಸಮರ್ಥಿಸಿಕೊಂಡರು. ಕೋವಿಡ್ ಲಸಿಕೆ ಸುರಕ್ಷಿತವಲ್ಲ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಅಂತಿಮವಾಗಿ ಅವರೇ ಮೊದಲಿಗರಾಗಿ ಲಸಿಕೆ ಹಾಕಿಸಿಕೊಂಡರು. ಈ ಬಗ್ಗೆ ಭಾರಿ ಅಪಪ್ರಚಾರ ಮಾಡಿ, ಕೊನೆಗೆ ಸುಮ್ಮನಾಗಬೇಕಾಯಿತು ಎಂದು ಕಾಂಗ್ರೆಸ್ ವಿರುದ್ಧ ಭಾಟಿಯಾ ಹರಿಹಾಯ್ದರು.
ಇದನ್ನೂ ಓದಿ: ಅಳಿಯನಿಗೆ ಸಿಗದ ಟಿಕೆಟ್: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಮಾಜಿ ಶಾಸಕ ಶಫಿ ಅಹಮದ್ ರಾಜೀನಾಮೆ
''ಜನರನ್ನು ಹಸಿವಿನಿಂದ ರಕ್ಷಿಸಲು ಪಡಿತರ ಕೊಡಲಾಗಿದ್ದು, ಕರ್ನಾಟಕದ 4 ಕೋಟಿ ಜನರು ಪ್ರಯೋಜನ ಪಡೆದುಕೊಂಡಿದ್ದಾರೆ'' ಎಂದು ಗೌರವ್ ಭಾಟಿಯಾ ತಿಳಿಸಿದರು. ಕರ್ನಾಟಕದಲ್ಲಿ ಜನರು ಬಿಜೆಪಿ ಪರವಾಗಿದ್ದಾರೆ. ಕಮಲ ಚಿಹ್ನೆಯನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ'' ಎಂದ ಅವರು, ಡಬಲ್ ಎಂಜಿನ್ ಸರ್ಕಾರ ಮತ್ತು ಬಿಜೆಪಿಯೇ ಭರವಸೆ ಎಂಬುದು ಜನರ ವಿಶ್ವಾಸದ ನುಡಿ ಎಂದು ಭಾಟಿಯಾ ಕರ್ನಾಟಕ ರಾಜ್ಯದ ಮತದಾರರ ಪರ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಂದಿನಿ ಮುಗಿಸಿ, ಅಮುಲ್ ಬೆಳೆಸಲು ತೀರ್ಮಾನಿಸಿದ ಬಿಜೆಪಿ: ಡಿಕೆಶಿ
ಇದನ್ನೂ ಓದಿ: ರಾಜ್ಯಕ್ಕೆ 4 ಮುಖ್ಯಮಂತ್ರಿಗಳನ್ನು ನೀಡಿದ ರಾಮನಗರ: ಇದೇ ಜಿಲ್ಲೆಯಿಂದ ಮತ್ತಿಬ್ಬರು ಘಟಾನುಘಟಿಗಳು ಸಜ್ಜು