ಬೆಂಗಳೂರು: ತುಮಕೂರಿನ ಮಧುಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿತರಾಗಿರುವ ಎಲ್.ಸಿ.ನಾಗರಾಜು ಬಹುಕೋಟಿ ಐಎಂಎ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣ ಎದುರಿಸುತ್ತಿರುವ ಅಧಿಕಾರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ರಾಜಕೀಯ ವಲಯದಲ್ಲಿ ಅಚ್ಚರಿಯ ಜೊತೆಗೆ ಚರ್ಚೆಗೆ ಗ್ರಾಸವಾಗಿದೆ.
2019ರ ಐಎಂಎ ಪ್ರಕರಣದ ಚಾರ್ಜ್ಶೀಟ್ನಲ್ಲಿ ಕೆಎಎಸ್ ಅಧಿಕಾರಿಯಾಗಿದ್ದ ಎಲ್.ಸಿ. ನಾಗರಾಜು ಹೆಸರಿತ್ತು. ಸಿಬಿಐ, ಲೋಕಾಯುಕ್ತ, ಕೆಎಎಸ್ ಇಲಾಖಾ ಹಂತಗಳಲ್ಲಿ ನಾಗರಾಜ್ ಈಗಲೂ ವಿಚಾರಣೆ ಎದುರಿಸುತ್ತಿದ್ದಾರೆ. 2021 ರಲ್ಲಿ ನೆಲಮಂಗಲ ಪರಮಣ್ಣ ಬಡಾವಣೆಯಲ್ಲಿರುವ ಅವರ ಮನೆ, ಆಪ್ತರು, ಸಂಬಂಧಿಕರ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿತ್ತು.
ಕಳೆದ ವರ್ಷವಷ್ಟೇ ನಾಗರಾಜ್ ಅವರು ವೈಯಕ್ತಿಕ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇದಾದ ಬಳಿಕ ರಾಜಕೀಯಕ್ಕೆ ಧುಮುಕಿದ ಅವರಿಗೆ ಬಿಜೆಪಿ ಮಧುಗಿರಿ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಇದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಆಗಲೇ ಸ್ಪಷ್ಟನೆ ಕೊಟ್ಟಿದ್ದ ಮಾಜಿ ಅಧಿಕಾರಿ: ತಮ್ಮ ಮೇಲೆ ಕೇಳಿ ಬಂದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದ ಅವರು, ‘‘ಹಿರಿಯ ಅಧಿಕಾರಿಯೊಬ್ಬರು ಬೇಕು ಅಂತಲೇ ದಾಳಿ ಮಾಡಿಸಿದ್ದಾರೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪದೇ ಪದೆ ನನ್ನ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸಲಾಗುತ್ತಿದೆ. ದಾಳಿಗೆ ನಾನು ಹೆದರುವುದಿಲ್ಲ. ನನ್ನನ್ನು ಗುರಿಯಾಗಿಸಿ ಹಲವು ದಾಳಿ ನಡೆಸಲಾಗಿದೆ. ಈ ವೇಳೆ ಸಿಕ್ಕ ವಸ್ತುಗಳಿಗೆ ದಾಖಲೆಗಳಿವೆ‘‘ ಎಂದು ಸ್ಪಷ್ಟನೆ ಕೊಟ್ಟಿದ್ದರು.
ಓದಿ: ವಿಧಾನಸಭೆ ಚುನಾವಣೆ: ನಾಳೆ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ